ಉಡುಪಿ, ಎ05(SS): ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ ಘಟನೆ ಉಡುಪಿ - ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉದ್ಯಾವರದಲ್ಲಿ ನಡೆದಿದೆ.
ಉಡುಪಿ - ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ಆಪ್ತರು ಎನ್ನಲಾದ ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತರಾದ ಉದ್ಯಾವರ ಸಿದ್ಧಿವಿನಾಯಕ ದೇವಸ್ಥಾನ ಬಳಿಯ ನಿವಾಸಿ ಸದಾಶಿವ ಕಟ್ಟೆಗುಡ್ಡೆ ಮತ್ತು ಗ್ರಾಪಂ ಸದಸ್ಯ ಲಕ್ಷ್ಮಣ್ ಸಂಪಿಗೆನಗರ ಎಂಬವರ ಮನೆಗೆ ಫ್ಲೈಯಿಂಗ್ ಸ್ವಾಡ್ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿಯ ಆದಾಯ ತೆರಿಗೆ ಕಚೇರಿಗೆ ಸದಾಶಿವ ಕಟ್ಟೆಗುಡ್ಡೆ ಅವರನ್ನು ಕರೆ ತಂದು ವಿಚಾರಣೆ ನಡೆಸಲಾಗುತ್ತಿದ್ದು, ಲಕ್ಷ್ಮಣ್ ಅವರ ಮನೆಯಲ್ಲಿ ಶೋಧಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ವೇಳೆ ನಗದು ಪತ್ತೆಯಾದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.