ಚಿಕ್ಕಮಗಳೂರು, ಎ05(SS): ಬಿಜೆಪಿ ಪಕ್ಷದವರು ಬರೀ ಮತ ಪಡೆಯುವ ಉದ್ದೇಶದಿಂದ ಗೋಪ್ರೇಮದ ನಾಟಕವಾಡುತ್ತಿದ್ದಾರೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಟೀಕಿಸಿದರು.
ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಶಾಲೆಯಲ್ಲಿ ಬಂಜೆ ಹಸು, ಹೋರಿಗಳನ್ನು ಸಾಕುತ್ತಿರುವ ನನ್ನನ್ನು ಬಿಜೆಪಿಯವರು ಹಿಂದೂ ವಿರೋಧಿ ಎಂದು ಹೇಳುತ್ತಿದ್ದಾರೆ. 2004ರಲ್ಲಿ ಎರಡು ಗೋವುಗಳನ್ನು ನಾನು ಖರೀದಿ ಮಾಡಿದ್ದೆ. ಅವು ಕರು ಹಾಕಿದ್ದರಲ್ಲಿ 15 ಗಂಡು. ಈಗ ಆ ಹಸುಗಳೂ ಬಂಜೆಯಾಗಿವೆ. ಒಟ್ಟು 25 ಹಸುಗಳಿದ್ದು, ಅವೆಲ್ಲವನ್ನೂ ನಾನು ಸಾಕುತ್ತಿದ್ದೇನೆ ಎಂದು ಹೇಳಿದರು.
ಗೋಮಾತೆ, ಗೋಮಾತೆ ಎಂದು ಹೇಳುವ ಬಿಜೆಪಿಯವರ ಮನೆಯಲ್ಲಿ ಗೋಶಾಲೆಗಳಿವೆಯೇ...? ಒಂದು ವೇಳೆ ಇದ್ದರೂ ನೀವು ಎಷ್ಟು ಗಂಡು ಹಾಗೂ ಬಂಜೆ ದನಗಳನ್ನು ಸಾಕುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಬರೀ ವೋಟಿಗಾಗಿ ಅವರು ಉರಿಬಿಸಿಲಲ್ಲಿ ಹಸುವಿಗೆ ಕೇಸರಿ ಬಣ್ಣದ ಪೇಂಟಿಂಗ್ ಮಾಡಿ ಹಿಂಸೆ ಕೊಟ್ಟಿದ್ದನ್ನು ನಾನು ನೋಡಿದ್ದೇನೆ. ಅವರಿಗೆ ಗೋಮಾತೆ ಬೇಡ, ವೋಟು ಬೇಕು. ವೋಟಿಗಾಗಿ ಅವರು ಗೋಮಾತೆಯನ್ನೂ ದುರುಪಯೋಗ ಮಾಡುತ್ತಾರೆ. ಆದರೆ, ನನ್ನನ್ನು ಹಿಂದೂ ವಿರೋಧಿ ಎಂದು ಹೇಳುತ್ತಾರೆ ಎಂದು ಟೀಕಿಸಿದರು.
ಮೋದಿಗಾಗಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ ಕೊಡಿ ಎಂದು ಕೇಳುತ್ತಿದ್ದಾರೆ. ನಾನು ಇದೇ ಕ್ಷೇತ್ರದ ಉಡುಪಿಯಲ್ಲಿ ವಾಸವಿದ್ದೇನೆ. ಆದರೆ ಶೋಭಾ ವಲಸೆ ಬಂದವರು. ಅವರು ಬೆಂಗಳೂರಿನಲ್ಲಿ ವೋಟು ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಗೆಲ್ಲಿಸಿದ ಕಾರಣಕ್ಕಾದರೂ ಕನಿಷ್ಠ ಇಲ್ಲೊಂದು ಮನೆ ಮಾಡುವ ಮನಸ್ಸು ಮಾಡಲಿಲ್ಲ ಎಂದು ಹೇಳಿದರು.
ಮೈತ್ರಿಯ ಕಾರಣಕ್ಕೆ ನಾನು ಕಾಂಗ್ರೆಸ್ ಸದಸ್ಯನಾಗಿ, ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧೆ ಮಾಡಿ ಈ ರೂಪದಲ್ಲಿ ಕಾಣಿಸಿಕೊಂಡಿದ್ದೇನೆ. ಜೆಡಿಎಸ್ - ಕಾಂಗ್ರೆಸ್ ಚಿಹ್ನೆಯುಳ್ಳ ಶಾಲನ್ನು ಕರ್ನಾಟಕದಲ್ಲಿ ಮೊದಲು ತಯಾರಿಸಿದ್ದೇ ನಾನು ಎಂದು ಹರ್ಷ ವ್ಯಕ್ತಪಡಿಸಿದರು.