ಮಂಗಳೂರು ನ 09: ನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕಾ ಅಡ್ಡಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸಹ್ಯಾದ್ರಿ ಕಾಲೇಜಿನ ಹಿಂಬಾಗದ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಮಂಗಳೂರು ಗ್ರಾಮಾಂತರ ಠಾಣಾ ಪೊಲಿಸ್ ಅಧಿಕಾರಿಗಳು ಮತ್ತು ಕಂಕನಾಡಿ ನಗರ ಠಾಣಾ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ವಾಹನಗಳಲ್ಲಿ ಮರಳನ್ನು ತುಂಬಿಸಿ ಸಮೀಪದ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಶೇಖರಿಸುತ್ತಿರುವುದು ಪತ್ತೆಯಾಗಿದೆ. ಅಕ್ರಮಕ್ಕೆ ಬಳಸಿರುವ ವಾಹನಗಳ ಮಾಲಕರ ಹಾಗೂ ಅಕ್ರಮ ಮರಳು ಶೇಖರಣೆಗೆ ಅವಕಾಶ ನೀಡಿದ್ದ ಭೂ ಮಾಲಿಕರ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಂತ್ರೋಪಕರಣಗಳು, ಮರಳು ತುಂಬಿದ ವಾಹನಗಳು ಹಾಗೂ 1 ಕೋಟಿ ರೂಪಾಯಿ ಮೌಲ್ಯದ ಮರಳನ್ನು ವಶಪಡಿಸಲಾಗಿದೆ.