ಮಂಗಳೂರು,ಏ 05 (MSP): ಖಾಸಗಿ ಮತ್ತು ಇತರ ವಾಹನಗಳಲ್ಲಿ ವ್ಯಾಪಾರ ಮತ್ತು ವ್ಯಕ್ತಿಗಳ, ಪಕ್ಷಗಳ ಜಾಹೀರಾತು ಮತ್ತು ಅಥವಾ ಧ್ಯೇಯೋಕ್ತಿ (ಸ್ಲೋಗನ್)ಗಳನ್ನು ವಾಹನದ ಹಿಂಭಾಗ ಮತ್ತು ಮುಂಭಾಗದ ಕಿಟಕಿ ಗಾಜಿನ ಮೇಲೆ ಪ್ರದರ್ಶನ ಮಾಡಿ ಓಡಾಡುತ್ತಿರುವುದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರ ಗಮನಕ್ಕೆ ಬಂದಿದ್ದು, ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಸೂಕ್ತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಈ ರೀತಿಯಾಗಿ ವ್ಯಾಪಾರ ಮತ್ತು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಯಾವುದೇ ಜಾಹೀರಾತು ಅಥವಾ ಧ್ಯೇಯೋಕ್ತಿಗಳನ್ನು ಪ್ರದರ್ಶಿಸುವುದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿರುತ್ತದೆ. ಅಲ್ಲದೆ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ.
ಆದ್ದರಿಂದ, ಎಲ್ಲಾ ವಾಹನ ಮಾಲೀಕರು ಯಾವುದೇ ಧ್ಯೇಯೋಕ್ತಿ ಆಗಲಿ ಅಥವಾ ಜಾಹೀರಾತು ಆಗಲಿ ತಮ್ಮ ವಾಹನದ ಮೇಲೆ ಪ್ರದರ್ಶಿಸುವಂತಿಲ್ಲ. ಚುನಾವಣಾ ಸಮಯದಲ್ಲಿ ಈ ರೀತಿಯ ಉಲ್ಲಂಘನೆಗಳು ಕಂಡುಬಂದಲ್ಲಿ ಯಾವುದೇ ಮರುನೋಟೀಸ್ ನೀಡದೆ ವಾಹನವನ್ನು ಮುಟ್ಟುಗೋಲು ಹಾಕಿ ಕಾನೂನು ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.