ಉಳ್ಳಾಲ ನ 9: ತಲಪಾಡಿ ಕೆ.ಸಿರೋಡ್ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಶಾಖಾ ಕಛೇರಿಯಲ್ಲಿ ಮೃತಪಟ್ಟ ಮೂವರ ಅಂತ್ಯ ಸಂಸ್ಕಾರ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ನ ಆಡಳಿತ ಮಂಡಳಿ ಶಾಖಾಧಿಕಾರಿ ಮತ್ತು ಸೆಕ್ಯುರಿಟಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಸೆಕ್ಯುರಿಟಿ ಸಂಸ್ಥೆಗೆ ಸೇರಿದ ಮಂಜನಾಡಿ ನಿವಾಸಿ ಸಂತೋಷ್, ಕೊಲ್ಯ ಕಾಸಿಂಬೆಟ್ಟು ನಿವಾಸಿ ಸೋಮನಾಥ ಮತ್ತು ಕೋಟೆಕಾರು ಬ್ಯಾಂಕ್ನ ಖಾಯಂ ಸೆಕ್ಯುರಿಟಿ ಕೆ.ಸಿ.ರೋಡ್ ಕಾಲನಿ ನಿವಾಸಿ ಉಮೇಶ್ ಸೋಮವಾರ ಜನರೇಟರ್ನಿಂದ ಹೊರಸೂಸಿದ ವಿಷಾನಿಲದಿಂದ ಮೃತಪಟ್ಟಿದ್ದು ಮಂಗಳವಾರ ಘಟನೆ ಬೆಳಕಿಗೆ ಬಂದಿತ್ತು. ಮೃತರಲ್ಲಿ ಉಮೇಶ್ ಮತ್ತು ಸೋಮನಾಥ ಅವರ ಮೃತದೇಹದ ಅಂತ್ಯ ಸಂಸ್ಕಾರ ಮಂಗಳವಾರ ನಡೆದರೆ ಸಂತೋಷ್ ಅವರ ಅಂತ್ಯ ಸಂಸ್ಕಾರ ಬುಧವಾರ ಚೆಂಬುಗುಡ್ಡೆ ಸ್ಮಶಾನದಲ್ಲಿ ನಡೆಯಿತು ಸಚಿವ ಯು.ಟಿ.ಖಾದರ್ ಬುಧವಾರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.
ಘಟನೆಗೆ ಸಂಬಂದಿಸಿದಂತೆ 304ಎ ಕಾಯ್ದೆಯಡಿ ಪ್ರಕರಣ ದಾಖಲು : ಭದ್ರತಾ ಸಿಂಬಂದಿಗಳ ಸಾವಿನ ಪ್ರಕರಣಕ್ಕೆ ಸಂಬಂದಿಸಿದಂತೆ ಬ್ಯಾಂಕ್ನ ಆಡಳಿತ ಮಂಡಳಿ, ಶಾಖಾಧಿಕಾರಿ ಮತ್ತು ಸೆಕ್ಯುರಿಟಿ ಸಂಸ್ಥೆಯ ವಿರುದ್ಧ 304ಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತುರ್ತು ಸಭೆ ಪರಿಹಾರ ನೀಡಲು ನಿರ್ಧಾರ : ಸಾವನ್ನಪ್ಪಿದ ಭದ್ರತಾ ಸಿಬ್ಬಂದಿಗಳು ಬಡಕುಟುಂಬದ ಹಿನ್ನಲೆಯಲ್ಲಿ ಬ್ಯಾಂಕ್ನ ಆಡಳಿತ ಮಂಡಳಿ ಬುಧವಾರ ತುರ್ತುಸಭೆ ಕರೆದು ಚರ್ಚೆ ನಡೆಸಿತು. ಈ ಸಂದರ್ಭದಲ್ಲಿ ಮೃತ ಮೂವರ ಕುಟುಂಬಗಳಿಗೆ ಪರಿಹಾರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪೊಲೀಸರ ಸಮ್ಮುಖದಲ್ಲಿ ಬ್ಯಾಂಕ್ ಕಾರ್ಯಾರಂಭ : ದುರ್ಘಟನೆಗೆ ಕಾರಣವಾದ ಬ್ಯಾಂಕ್ನ ಶಾಖೆಯನ್ನು ಉಳ್ಳಾಲ ಪೊಲೀಸರ ಸಮ್ಮುಖದಲ್ಲಿ ಬುಧವಾರ ವ್ಯವಹಾರಕ್ಕೆ ತೆರೆಯಲಾಯಿತು. ಮಂಗಳವಾರ ಘಟನೆಯ ಬಳಿಕ ಪೊಲೀಸರು ತನಿಖೆಯ ದೃಷ್ಟಿಯಲ್ಲಿ ಬ್ಯಾಂಕ್ಗೆ ಬೀಗ ಜಡಿದಿದ್ದರು. ಬುಧವಾರ ಬ್ಯಾಂಕ್ನಲ್ಲಿ ವ್ಯವಹಾರ ಎಂದಿನಂತೆ ಪುನರಾರಂಭಗೊಂಡಿತು.