ಮಂಗಳೂರು, ಏ 05 (MSP): ಕಾಂಗ್ರೆಸ್ ಹಾಗೂ ಸಮಾನ ಮನಸ್ಥಿತಿಯ ಪಕ್ಷಗಳು ಈ ಬಾರಿ ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ‘ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ನಡೆಸಿದ ಪರಿಣಾಮ ದೇಶಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನ್ಯೂ ಇಂಡಿಯಾ ಹೆಸರಿನಲ್ಲಿ ದ್ವೇಷ ಮತ್ತು ಆತಂಕದ ವಾತಾವರಣ ಸೃಷ್ಟಿಸಿದ್ದೇ ಬಿಜೆಪಿ ಸರ್ಕಾರದ ಬಹುದೊಡ್ಡ ಸಾಧನೆಯಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ರೈತರ ಸಾಲ ಮನ್ನಾ ವಿಷಯದಲ್ಲೂ ಮೋದಿ ನೇತೃತ್ವದ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. 2003-04ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರಿಗೆ 83 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಆದರೆ ಯುಪಿಎ ಅಧಿಕಾರಕ್ಕೆ ಬಂದಾಗ ರೂ 8 ಲಕ್ಷ ಕೋಟಿ ರೂ ಅನ್ನು ರೈತರಿಗಾಗಿ ಬಿಡುಗಡೆ ಮಾಡಲಾಗಿತ್ತು ಎಂದರು. ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಂಡ, ಸುಪ್ರೀಂ ಕೋರ್ಟ್ನಿಂದ ಛೀಮಾರಿಗೊಳಗಾದ, ನೋಟು ಅಮಾನ್ಯಗೊಳಿಸಿದ ಕುಖ್ಯಾತಿ ಮೋದಿ ಸರಕಾರದ್ದಾಗಿದೆ ಎಂದರು.
ನಾವು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ ಮತ್ತು ನಮ್ಮ ಪ್ರಣಾಳಿಕೆ ದೇಶಾದ್ಯಂತ ಜನರೊಂದಿಗೆ ಸಂವಹನ ನಡೆಸುವ ಮೂಲಕ ಮೂಲಭೂತ ನೈಜತೆಯನ್ನು ಆಧರಿಸಿ ತಯಾರಿಸಿದೆ ಎಂದು ವಿ ಆರ್ ಸುದರ್ಶನ್ ಹೇಳಿದರು.