ಕುಂದಾಪುರ ನ 09: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಸಿಬ್ಬಂದಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯ ಸಿಬ್ಬಂದಿಗಳು ನ 9 ಗುರುವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದೆಯಷ್ಟೇ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಡಾ|ರಾಬರ್ಟ್ ರೆಬೆಲ್ಲೊ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಹೆಚ್ಚಿನ ಕೆಲಸದ ಒತ್ತಡ ಹೇರಿ, ಸುಖಸುಮ್ಮನೇ ರೇಗಾಡುತ್ತಿದ್ದಾರೆ ಎಂದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನೇರ ಆರೋಪಿಸುತ್ತಾರೆ. ಈ ವೈದ್ಯಾಧಿಕಾರಿ ಅಧಿಕಾರ ವಹಿಸಿಕೊಂಡ ನಂತರ ಹೊಸ ಹೊಸ ನಿಯಮಗಳನ್ನು ರೂಪಿಸಿದ್ದು, ನಾವು ಹಿಂದೆ ತಂಡ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು. ಈಗ ಅವೈಜ್ಞಾನಿಕವಾದ ನೀತಿಗಳನ್ನು ಅನುಸರಿಸಲು ಹೇಳಲಾಗುತ್ತಿದೆ ಎಂದು ಸಿಬ್ಬಂದಿಗಳು ಆರೋಪಿಸುತ್ತಾರೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಇದೇ ರೀತಿ ಕಿರುಕುಳ ನೀಡಲಾಗುತ್ತಿದೆ ಎಂದು ಇತರ ನರ್ಸ್ಗಳು ಆರೋಪಿಸುತ್ತಾರೆ. ನಮಗೆ ನ್ಯಾಯ ಸಿಗಬೇಕು. ನಾವು ಈ ತನಕ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವು. ಈಗ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ನಾವು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಒಟ್ಟಿನಲ್ಲಿ ನ್ಯಾಯ ಸಿಗಬೇಕು ಎನ್ನುತ್ತಾರೆ.
ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ 29 ನರ್ಸ್ಗಳು, ಇತರ ಸಿಬ್ಬಂದಿಗಳು ಸೇರಿ ಒಟ್ಟು 50 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಕುಂದಾಪುರ ತಾಲೂಕು ಮಾತ್ರವಲ್ಲದೇ ಜಿಲ್ಲೆಯ ಬೇರೆ ಬೇರೆ ಭಾಗಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ. ಸದಾ ಒಂದಿಲ್ಲೊಂದು ಸುದ್ಧಿಯಲ್ಲಿರುವ ಕುಂದಾಪುರ ಆಸ್ಪತ್ರೆಯಲ್ಲಿ ಮತ್ತೆ ಈಗ ವೈದ್ಯಾಧಿಕಾರಿಯ ವಿರುದ್ಧವೇ ಅಲ್ಲಿನ ಸಿಬ್ಬಂದಿಗಳು ತಿರುಗಿ ಬಿದ್ದು ಗಂಭೀರವಾದ ಆರೋಪ ಮಾಡುತ್ತಿದ್ದಾರೆ. " ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮಾಡುತ್ತೇವೆ. ಆದರೆ ನಮಗೆ ನ್ಯಾಯ ಬೇಕು " ಎನ್ನುವುದು ಅವರ ಬೇಡಿಕೆಯಾಗಿದೆ.
ಇನ್ನು ಈ ಬಗ್ಗೆ ವೈದ್ಯಾಧಿಕಾರಿ ಡಾ. ರೆಬೆಲ್ಲೋ ಸ್ಪಷ್ಟನೆ ನೀಡಿದ್ದು ಹೀಗೆ .
ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಊಟವನ್ನ ಸಂಜೆ 6 ಗಂಟೆಗೆ ನೀಡಲಾಗುತ್ತದೆ. ಈ ವ್ಯವಸ್ಥೆಯನ್ನ ಬದಲಾಯಿಸಿ ರಾತ್ರಿ 7 ಗಂಟೆಯಿಂದ 8 ಗಂಟೆಗೆ ನೀಡುವಂತೆ ಸೂಚಿಸಿದ್ದೆ. ಕಾವಲುಗಾರರು ಎಲ್ಲೆಲ್ಲೋ ಇರುತ್ತಿದ್ದರು ಅವರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿರುವಂತೆ ಸೂಚನೆ ನೀಡಲಾಗಿತ್ತು. ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವವರು ನಿದ್ರೆ ಮಾಡುತ್ತಿದ್ದರು. ಇದರಿಂದ ಎಷ್ಟೋ ಬಾರಿ ರೋಗಿಗಳು ವಾಪಾಸು ಹೋಗಿದ್ದಾರೆ. ಈ ಹಿನ್ನೆಲೆ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎಚ್ಚರದಿಂದಿರಬೇಕೆಂದು ಸೂಚಿಸಿದ್ದೇ. ಹೆರಿಗೆ ವಾರ್ಡ್ನಲ್ಲಿ ದಾದಿಯರು ಗರ್ಭಿಣಿ ಮತ್ತು ಬಾಣಂತಿಯರಿಗೆ ಬೈಯುತ್ತಾರೆ ಎನ್ನುವ ದೂರುಗಳಿವೆ ಈ ಎಲ್ಲಾ ಕಾರಣಗಳಿಗೆ ಹೊಸ ನಿಯಮಾವಳಿಗಳನ್ನ ತರಲಾಗಿತ್ತು. ಇದನ್ನ ಒಪ್ಪಿಕೊಳ್ಳದೆ ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.