ಉಡುಪಿ,ಏ 05 (MSP): 2019 ರ ಲೋಕಸಭಾ ಚುನಾವಣೆ ಇಡೀ ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಪರವಾದ ಅಲೆಯಿದ್ದು ಮತ್ತೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತೀಯ ಜನತಾ ಪಾರ್ಟಿ ತನ್ನ ಸ್ವಂತ ಶಕ್ತಿಮೇಲೆ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಎನ್.ಡಿ.ಎ. ಈ ಬಾರಿ 375 ಕ್ಕೂ ಹೆಚ್ಚು ಸ್ಥಾನಗಳನ್ನು ನಿಸ್ಸಂದೇಹವಾಗಿ ಗಳಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಚುನಾವಣಾ ನಿರ್ವಾಹಣಾ ಸಮಿತಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಹೇಳಿದರು.
5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅತ್ಯಂತ ಬಲಿಷ್ಟ ರಾಷ್ಟ್ರ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಪಾಕಿಸ್ತಾನ ಮತ್ತು ನೆರೆಯ ರಾಷ್ಟ್ರಗಳ ಉಗ್ರಗಾಮಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದು ಭಾರತದ ಶಕ್ತಿ ಏನೆಂಬುದನ್ನು ಸ್ವಾತಂತ್ರ್ಯ ನಂತರ ಪ್ರಥಮ ಬಾರಿಗೆ ಜಗತ್ತಿಗೆ ತೋರಿಸಿಕೊಟ್ಟವರು ನರೇಂದ್ರ ಮೋದಿ. ಆದರೆ ದುರದೃಷ್ಟಕರ ವಿಷಯವೆಂದರೆ ಈ ದೇಶದ ವಿಪಕ್ಷಗಳು ಪಾಕಿಸ್ತಾನ ಮತ್ತು ಶತ್ರು ರಾಷ್ಟ್ರಗಳ ಸ್ವರದಲ್ಲಿ ಮಾತನಾಡುತ್ತಿದ್ದು ದೇಶದ ಮಿಲಿಟರಿ ಕಾರ್ಯಚರಣೆಯನ್ನು, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಗೇಲಿ ಮಾಡುವ ಸ್ಥಿತಿಗೆ ತಲುಪಿದ್ದು ಅತ್ಯಂತ ಹೇಯ ಕೃತ್ಯವಾಗಿರುತ್ತದೆ. ಭಾರತ ದೇಶದ ಜನತೆ ಈ ಚುನಾವಣೆಯ ಎಂಬ ಮಹಾಸಂಗ್ರಾಮದಲ್ಲಿ ಇದಕ್ಕೆಲ್ಲ ಸರಿಯಾದ ಉತ್ತರವನ್ನು ಬಿಜೆಪಿ ಮತ್ತು ನರೇಂದ್ರ ಮೋದಿವರರಿಗೆ ಬೆಂಬಲಿಸುವುದರೊಂದಿಗೆ ನೀಡಲಿದ್ದಾರೆಂದು ಎಂದು ಮಟ್ಟಾರ್ ಹೇಳಿದ್ದಾರೆ.
ಕರಾವಳಿಯ 3 ಸ್ಥಾನಗಳನ್ನು ಭಾರತೀಯ ಜನತಾ ಪಾರ್ಟಿ ಈ ಬಾರಿಯೂ ಕೂಡ ಅತ್ಯಂತ ಸುಲಭವಾಗಿ ಗೆಲ್ಲಲಿದೆ ಎಂದು ತಿಳಿಸಿದ ಮಟ್ಟಾರ್ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹೊಸ ವಾತಾವರಣವಿದ್ದು ಕಾರ್ಯಕರ್ತರ ಶ್ರಮ ಮತ್ತು ದುಡಿಮೆಯ ಫಲವಾಗಿ ಮತ್ತು ಮೋದಿ 5 ವರ್ಷಗಳ ಕಾಲ ಸಮಾಜದ ಬಡವರ್ಗದವರಿಗೆ ನೀಡಿದ ಸವಲತ್ತುಗಳ ಆಧಾರದಲ್ಲಿ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ಹೇಳಿದ ಮಟ್ಟಾರ್ ಬಿಜೆಪಿ ಎದುರು ಉಳಿದ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಬಹುದು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿ, ಕುತ್ಯಾರು ನವೀನ್ ಶೆಟ್ಟಿ ಚುನಾವಣಾ ಕಾರ್ಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿಕೊಟ್ಟರು. ಪ್ರಮುಖರಾದ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿ. ರವಿ ಅಮೀನ್, ಸಂಧ್ಯಾ ರಮೇಶ್, ಮನೋಹರ ಎಸ್. ಕಲ್ಮಾಡಿ, ಶ್ರೀಶ ನಾಯಕ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಕಿರಣ್ ಕುಮಾರ್ ಕೊಡ್ಗಿ, ರಾಘವೇಂದ್ರ ಕಿಣಿ, ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದಾರೆ.