ಉಡುಪಿ,ಏ 05 (MSP): ಚುನಾವಣೆ ನೀತಿ ಸಂಹಿತೆ ಹಾಗೂ ಕೇಂದ್ರ ಮೋಟಾರ್ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇರೆಗೆ ನಗರದ ವಕೀಲರೊಬ್ಬರಿಗೆ ಸೇರಿದ ಕಾರೊಂದನ್ನು ಚುನಾವಣಾ ನೀತಿ ಸಂಹಿತೆ ಅಧಿಕಾರಿ ಮೇಜರ್ ಡಾ. ಹರ್ಷ ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ ಅನಂತಶಯನ ದೇವಸ್ಥಾನ ರಸ್ತೆಯ ಬಳಿಯಲ್ಲಿ ಕಚೇರಿ ಹೊಂದಿರುವ ವಕೀಲ ವಿಫುಲ್ ತೇಜ್ ಎಂಬವರಿಗೆ ಸೇರಿದ ಕೆ.ಎ. 19 ಎಂಜಿ 2211 ನಂಬ್ರದ ಕಾರಿನ ಹಿಂಭಾಗದ ಗಾಜಿನ ಪೂರ್ತಿ ಚೋಕಿದಾರ್ ಶೇರ್ ಹೈ ಎಂದು ಬರೆದಿರುವ ಸ್ಟಿಕರ್ನ್ನು ಅಂಟಿಸಿ ನಿಲ್ಲಿಸಲಾಗಿತ್ತು. ಸಾರ್ವಜನಿಕರ ಮಾಹಿತಿಯನ್ವಯ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಮೇಜರ್ ಡಾ. ಹರ್ಷ ಘಟನಾ ಸ್ಥಳಕ್ಕೆ ಅಗಮಿಸಿ ಕಾರಿನ ವಾರಿಸ್ತುದಾರರ ಗಮನಕ್ಕೆ ತಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸ್ವಿಕರನ್ನು ತೆಗೆಯಬೇಕು. ಇಲ್ಲದೇ ಹೋದಲ್ಲಿ ಕ್ರಮ ಕೈಗೊಳ್ಳಬೇಕಾಗಿತ್ತೆಂಬ ಸೂಚನೆಯನ್ನು ನೀಡಿದರು.
ವಕೀಲ ವಿಫುಲ್ ತೇಜ್ ವಾಗ್ವಾದಕ್ಕೆ ಅದಕ್ಕೆ ಅಕ್ಷೇಪ ವ್ಯಕ್ತಪಡಿಸಿ ಯಾವ ಕಾನೂನಲ್ಲಿ ಇಂತಹ ಸ್ಟಿಕ್ಕರ್ ಅಳವಡಿಸಬಾರದು ಎಂಬುದಿದೆ. ಈ ಬಗ್ಗೆ ಅದೇಶದ ಪ್ರತಿಯನ್ನು ನೀಡುವಂತೆ ಒತ್ತಾಯಿಸಿದರು. ಈ ಎಲ್ಲ ಬೆಳವಣಿಗೆಯಿಂದ ಜನಜಮಾಯಿಸುತ್ತಿರುವುದರಿಂದ ಘಟನಾ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಯಿತು. ಒಂದೆಡೆ ವಕೀಲರು ತಮ್ಮ ಸಹೋದ್ಯೋಗಿಯ ಪರವಾಗಿ ನಿಂತರೆ ಮತ್ತೊಂದೆಡೆಯಲ್ಲಿ ರಾಜಕೀಯ ಪಕ್ಷದ ಮುಖಂಡರು ವಕೀಲರಿಗೆ ಸಾಥ್ ನೀಡಿದರು.
ಕಾರನ್ನು ಸಾಗಿಸಲು ಟೋವ್ ವಾಹನ ಘಟನಾ ಸ್ಥಳಕ್ಕೆ ಅಗಮಿಸಿದ್ದು, ಕೊನೆಗೂ ವಕೀಲರ ಮನವೊಲಿಸುವಲ್ಲಿ ಸಫಲರಾದ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಮೇಜರ್ ಡಾ. ಹರ್ಷ ಕಾರಿನ ಕೀಲಿಯನ್ನು ಪಡೆದುಕೊಂಡು ನಗರಠಾಣೆಗೆ ರವಾಯಿಸಿದ್ದಾರೆ.