ಉಡುಪಿ,ಏ05(AZM):ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ಅತ್ಯಾಚಾರ,ಕೊಲೆ ಪ್ರಕರಣದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಸಹಕರಿಸಿದ ಸಾರ್ವಜನಿಕರನ್ನುಉಡುಪಿ ಪೊಲೀಸ್ ಇಲಾಖೆಯಿಂದ ಅಭಿನಂಧಿಸುವ ಕಾರ್ಯಕ್ರಮ ಇಂದು ನಗರದ ಹಿರಿಯಡ್ಕ ಮಾಧವ ಮಂಗಲ ಸಭಾ ಭವನದಲ್ಲಿ ನಡೆಯಿತು.
ಮಣಿಪಾಲ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದ ಆರೋಪಿ ಹನುಮಂತ ಬಸಪ್ಪ ಎಂಬಾತನನ್ನು ಮಾ.೩೧ರಂದು ಹಿರಿಯಡ್ಕ ಕಾರಾಗೃಹಕ್ಕೆ ಕೊಂಡೊಯ್ಯುವ ವೇಳೆ ವಾಹನದಿಂದ ಜಿಗಿದು ಅಲ್ಲೇ ಕಾಡಿನಲ್ಲಿ ಪರಾರಿಯಾಗಿದ್ದ. ಪೊಲೀಸರು ರಾತ್ರಿ ಹಗಲು ಎಂಬಂತೆ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದರು.ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಿಶಾ ಜೇಮ್ಸ್ ಐಪಿಎಸ್, ಉಡುಪಿ ಜಿಲ್ಲೆರವರು ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದು, ಇದಕ್ಕೆ ಸ್ಥಳೀಯ ಜನರು ಸಾಥ್ ನೀಡಿ ರಾತ್ರಿ ಹಗಲು ಪೊಲೀಸರೊಂದಿಗೆ ಕಾರ್ಯನಿರ್ವಹಿಸಿದರು. ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಈ ಹಿನ್ನಲೆ ಇಂದು ಆರೋಪಿಯನ್ನು ಜಾಡು ಹಿಡಿದು ಪತ್ತೆ ಮಾಡುವಲ್ಲಿ ಸಹಕರಿಸಿದ ಸಾರ್ವಜನಿಕರಿಗೆ ಅಭಿನಂದನಾ ಸಮಾರಂಭವನ್ನು ಹಿರಿಯಡ್ಕ ಮಾಧವ ಮಂಗಲ ಸಭಾ ಭವನದಲ್ಲಿ ನಡೆಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಐಪಿಎಸ್ ರವರು ವಹಿಸಿದ್ದರು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಸಾರ್ವಜನಿಕರ ಸಹಕಾರವನ್ನು ಹೊಗಳಿ, ಇನ್ನು ಮುಂದಕ್ಕೂ ಸಹ ಇದೇ ರೀತಿ ಮಾಹಿತಿ ನೀಡಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕೋರಿದರು.
ಸಾರ್ವಜನಿಕರ ಪರವಾಗಿ ಶ್ರೀ ಕೃಷ್ಣ ಪ್ರಸಾದ್ ಶೆಟ್ಟಿ ಮತ್ತು ಶ್ರೀ ಕೃಷ್ಣ ಕುಲಾಲ್ ರವರು ಮಾತನಾಡಿ ಪೊಲೀಸ್ ಇಲಾಖೆಯ ಅಭಿನಂದನಾ ಸಮಾರಂಭ ಕ್ಕೆ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಅವರು ಶ್ರೀಲತಾ ಮತ್ತು ಪುಷ್ಪಲತಾ ಎಂಬವರನ್ನು ಸನ್ಮಾನಿಸಿದರು ಹಾಗೂ ಸಹಕರಿಸಿದ ಇತರ ಸಾರ್ವಜನಿಕರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.