ಕೊಪ್ಪ, ಎಂ6(SS): ದೇಶದಲ್ಲಿ ಪರಿವರ್ತನೆಗಾಗಿ ಪ್ರಮೋದ್ ಮಧ್ವರಾಜ್ನನ್ನು ಬೆಂಬಲಿಸಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿಯಾದಾಗ ಹಿಂದಿನ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸ್ಪಂದಿಸಲಿಲ್ಲ. ಆದರೆ ರಾಜ್ಯ ಸರಕಾರದಿಂದ ಕೂಡಲೇ 40ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈಗಾಗಲೆ ನೀರಾವರಿ ಯೋಜನೆಗೆ 300 ಕೋಟಿ ರೂ., ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿಗಾಗಿ 297 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಒಂದು ವೇಳೆ ಗುತ್ತಿಗೆದಾರರಿಂದ ಹಣ ಪಡೆದ ಆರೋಪ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮೋದಿಯ ಬಣ್ಣ ಬಣ್ಣದ ಮಾತಿಗೆ ಮರುಳಾಗಬೇಡಿ. ಅವರು ದೇಶದ ಭದ್ರತೆ ಹೆಸರಿನಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ. ದೇಶದಲ್ಲಿ ಪರಿವರ್ತನೆಗಾಗಿ ಪ್ರಮೋದ್ ಮಧ್ವರಾಜ್ರನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಮೋದಿ ತಮ್ಮ ಸ್ವಾರ್ಥಕ್ಕಾಗಿ ಬೇರೆಯವರನ್ನು ಬಲಿ ಕೊಡುತ್ತಿದ್ದಾರೆ. ಕಳೆದ 5 ವರ್ಷದಲ್ಲಿ ಬಿಜೆಪಿ ಕೊಡುಗೆ ಏನೂ ಇಲ್ಲ. ಸುಮಾರು ಎರಡೂವರೆ ವರ್ಷದ ಹಿಂದೆ ತಮಿಳುನಾಡಿನ 2 ಸಾವಿರ ರೈತರು ದೆಹಲಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಆಯೊಜಿಸಿದಾಗ ಮೋದಿ ಅವರನ್ನು ಕೇಳಲೇ ಇಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಸುಮಾರು 15.58 ಲಕ್ಷ ರೈತ ಕುಟುಂಬಕ್ಕೆ ಸಾಲಮನ್ನಾ ಮಾಡಲಾಗಿದೆ. ಜಿಲ್ಲೆಯ ಸಹಕಾರಿ ಬ್ಯಾಂಕ್ನಲ್ಲಿ ರೈತರ ಸಾಲ ಮನ್ನಾ ಮಾಡಲು 180 ಕೋಟಿ ರೂ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ 76 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಮೋದಿ ರೈತರಿಗೆ ಘೋಷಿಸಿದ ತಲಾ 6 ಸಾವಿರ ವಾರ್ಷಿಕ ಸಹಾಯಧನಕ್ಕೆ ರಾಜ್ಯದಿಂದ 48 ಲಕ್ಷ ರೈತರು ಅರ್ಜಿ ನೀಡಿದ್ದು, 6 ಮಂದಿಗೆ ಬಿಡುಗಡೆಯಾಗಿದೆ. ಅದರಲ್ಲಿ ಒಬ್ಬರಿಗೆ ಕೇವಲ 950 ರೂ. ಬಂದಿದೆ ಎಂದು ವ್ಯಂಗ್ಯವಾಡಿದರು.