ಮಂಗಳೂರು, ನ 09: ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿ ಬಗ್ಗೆ ಮಾತನಾಡುವ ಸಿ.ಎಂ. ಸಿದ್ಧರಾಮಯ್ಯನವರು ಮೊದಲು ತಮ್ಮ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಯೋಚಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸಿ.ಎಂ.ಸಿದ್ಧರಾಮಯ್ಯ ಕಾಂಗ್ರೇಸ್ ಪಕ್ಷದ ವತಿಯಿಂದ ರ್ಯಾಲಿ ನಡೆಸಲು ಉದ್ಧೇಶಿಸಿದ್ದು, ಈ ರ್ಯಾಲಿಗೆ ಅವರ ಪಕ್ಷದಿಂದಲೇ ಅಪಸ್ವರ ವ್ಯಕ್ತವಾಗುತ್ತಿದೆ. ಪಕ್ಷದ ನಾಯಕ ಡಾ. ಪರಮೇಶ್ವರ್ ಪ್ರತ್ಯೇಕ ರ್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ. ಇಷ್ಟೊಂದು ಗೊಂದಲ ಪಕ್ಷದಲ್ಲೇ ಇರುವಾಗ ಬಿಜೆಪಿ ರ್ಯಾಲಿಯ ಬಗ್ಗೆ ಟೀಕಿಸಲು ಸಿಎಂಗೆ ನಾಚಿಕೆಯಾಗಬೇಕು ಎಂದರು. ನೋಟ್ ಬ್ಯಾನ್ ಮಾಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕೇಂದ್ರದ ವಿರುದ್ಧ ಕರಾಳ ದಿನ ಆಚರಿಸುವವರು ಮೂರ್ಖರು ಎಂದು ಅವರು ಲೇವಡಿ ಮಾಡಿದ್ರು.