ಉಡುಪಿ, ಏ 06 (MSP): ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಶಿವಸೇನಾ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತಮ್ಮ ಪ್ರಚಾರ ವಾಹನದಲ್ಲಿ ಅಳವಡಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ . ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮೈತ್ರಿಯಾಗಿ ಸ್ಪರ್ಧೆಗೆ ಇಳಿದಿದೆ. ಆದರೆ ಕರ್ನಾಟಕದಲ್ಲಿ ಶಿವಸೇನೆ ಹತ್ತು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಡುಪಿ ಚಿಕ್ಕಮಗಳೂರು ಕ್ಶೇತ್ರದಲ್ಲಿ ಯುವ ಅಭ್ಯರ್ಥಿ ಗೌತಮ್ ಪ್ರಭು ಸ್ಪರ್ಧಿಸುತ್ತಿದ್ದು ತಮ್ಮ ಪ್ರಚಾರ ವಾಹನದಲ್ಲಿ ಮತ್ತು ಕರಪತ್ರಗಳಲ್ಲಿ ಈಗಾಗಲೇ ಕೇಂದ್ರದಲ್ಲಿ ಮೈತ್ರಿ ಆದಂತೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಹಾಕಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಬಿಜೆಪಿ ಮುಖಂಡರಿಗೆ ದೊಡ್ಡ ತಲೆನೋವು ತಂದಿಟ್ಟಿದೆ.
ಕಾರಣ ಹೇಳಬೇಕಿಲ್ಲ ಯಾಕೆಂದರೆ, ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಮತಗಳನ್ನು ಯಾವುದೇ ಕೆಲಸವನ್ನು ಮಾಡದ, ಐದು ವರ್ಷ ಜನರ ಕೈಗೆ ಸಿಗದ ಅಭ್ಯರ್ಥಿಗೆ ಹಾಕುವ ಬದಲು ನರೇಂದ್ರ ಮೋದಿಯನ್ನು ಬೆಂಬಲಿಸು ಶಿವಸೇನಾ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ .ಈಗಾಗಲೇ ಉಡುಪಿ ಭಾಗದಲ್ಲಿ ಮರಳಿನ ಸಮಸ್ಯೆ ,ಟೋಲ್ ಸಮಸ್ಯೆ ಬಗೆಹರಿಸುವಲ್ಲಿ ಶೋಭಾ ಕರಂದ್ಲಾಜೆ ವಿಫಲವಾದ ಹಿನ್ನೆಲೆಯಲ್ಲಿ ಉಡುಪಿ ಮತದಾರರು ಇವರ ವಿರುದ್ಧ ಆಕ್ರೋಶದಲ್ಲಿದ್ದು ಸ್ವಪಕ್ಷೀಯರು ನರೇಂದ್ರ ಮೋದಿ ಬೆಂಬಲಿಸುವ ಶಿವಸೇನಾ ಅಭ್ಯರ್ಥಿಯ ಸಾಧ್ಯತೆ ಇದೆಂದು ಬಿಜೆಪಿ ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ ಹತ್ತು ಕ್ಷೇತ್ರದಲ್ಲಿ ಶಿವಸೇನೆಯ ಕಣಕ್ಕಿಳಿಸಿದ್ದು ಬಿಜೆಪಿಯ ಯಾವ ನಾಯಕರು ನಮ್ಮ ಜೊತೆ ಮಾತುಕತೆಗೆ ಬಾರದ ಕಾರಣ ನಾವು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇವೆ.ನರೇಂದ್ರ ಮೋದಿ ಭಾವಚಿತ್ರವನ್ನು ನಾವು ಪ್ರಚಾರ ಕಾರ್ಯಕ್ಕೆ ಹಾಕಿಕೊಂಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಚಾರ ನಡೆಸಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲು ಶಿವಸೇನೆಯು ಹೋರಾಟ ನಡೆಸುವುದಾಗಿ ಶಿವಸೇನೆಯ ರಾಜ್ಯ ಉಸ್ತುವಾರಿ ಮಧುಕರ್ ಮುದ್ರಾಡಿ ತಿಳಿಸಿದ್ದಾರೆ.