ಮಂಗಳೂರು, ಏ 06 (MSP): ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕೇಸರಿ ಶಾಲು ಹಾಕಿ ಪ್ರಚಾರಕ್ಕಿಳಿದರೆ ಜನ ನಂಬಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಏ. 06 ರ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಆರ್. ಅಶೋಕ್, ಮಿಥುನ್ ರೈ ಕೇಸರಿ ಶಾಲು ಹಾಕಿ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಕೇಸರಿ ಶಾಲು ಹಾಕಿದ ತಕ್ಷಣ ಜನ ಅವರನ್ನು ನಂಬಲ್ಲ ಎಂದು ಹೇಳಿದರು.
ಉಳಾಯಿಬೆಟ್ಟು ಕೋಮು ಗಲಭೆಯ ಕೇಸ್ ವಾಪಾಸ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಧರ್ಮ ರಾಜಕಾರಣ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ರಾಜಕಾರಣ ಸರಿಯಲ್ಲ.ಕಾಂಗ್ರೆಸ್ ಪಕ್ಷವೂ ಪ್ರಣಾಳಿಕೆಯಲ್ಲಿ ದೇಶದ್ರೋಹದ ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದೆ.ಇದರಿಂದ ದೇಶದ್ರೋಹ ಕೃತ್ಯ ಜಾಸ್ತಿಯಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಬಿಜೆಪಿ ಮುಖಂಡರು ಭಾಗವಹಿಸುತ್ತಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಪ್ರಚಾರದ ಉದ್ಘಾಟನೆ ಮಾಡಿದ್ದೇ ನಾನು. ಬಿಜೆಪಿ ಪರ ನಾವು ಕಾಯ-ವಾಚ-ಮನಸ್ಸು ಕೆಲಸ ಮಾಡುತ್ತೇವೆ. ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ದೊಡ್ಡ ಅಂತರದಲ್ಲಿ ತೇಜಸ್ವಿ ಸೂರ್ಯ ಗೆಲ್ಲುತ್ತಾರೆ ಎಂದು ಹೇಳಿದ ಅವರು ಕುಟುಂಬ ರಾಜಕಾರಣ ವಿಚಾರವಾಗಿ ನಾವು ತೇಜಸ್ವಿನಿಯವರಿಗೆ ಅವಕಾಶ ನಿರಾಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು.