ಮಂಗಳೂರು, ನ 9: ಬೆಂಗಳೂರಿನಲ್ಲಿ ಈಗಾಗಲೇ ಆರಂಭಗೊಂಡಿರುವ ಕಡಿಮೆ ದರದ ಸರಕಾರಿ ಇಂದಿರಾ ಕ್ಯಾಂಟೀನ್ 2018 ರ ಜನವರಿ ತಿಂಗಳಿನಿಂದ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಆರಂಭಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ 5 ಕಡೆ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದ್ದು, ಕ್ಯಾಂಟೀನ್ ಸ್ಥಾಪನೆಗೆ ಸ್ಥಳ ಗುರುತಿಸಿಯಾಗಿದೆ. ತೊಕ್ಕೊಟ್ಟು ಸೇರಿದಂತೆ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತು ಸುಳ್ಯ ತಾಲೂಕಿನ ಕೇಂದ್ರಗಳಲ್ಲಿ ಆರಂಭಗೊಳ್ಳಲಿರುವ ಈ ಕ್ಯಾಂಟೀನ್ ಕುರಿತು ಶೀಘ್ರದಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಟೆಂಡರ್ ಆಹ್ವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.