ಕುಂದಾಪುರ,ಏ 06 (MSP): ಅಕ್ರಮವಾಗಿ ನಡೆಸುತ್ತಿರುವ ಇಸ್ಪೀಟ್ ಕ್ಲಬ್ ಮೇಲೆ ದಾಳಿ ನಡೆಸಿರುವ ಪೊಲೀಸರು, ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಇಪ್ಪತ್ತು ಜನರನ್ನು ಬಂಧಿಸಿ, 12,23000 ರು. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಹೈಕಾಡಿ ಎಂಬಲ್ಲಿ ಸುರೇಶ್ ಶೆಟ್ಟಿ ಎಂಬವರು ಅಕ್ರಮವಾಗಿ ನಡೆಸುತ್ತಿರುವ ಇಸ್ಪೀಟ್ ಕ್ಲಬ್ ಗೆ ಏ.05 ರ ಶುಕ್ರವಾರ ರಾತ್ರಿ, ಎಎಸ್ಪಿ ಕೃಷ್ಣಕಾಂತ್ ಇವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಇಪ್ಪತ್ತು ಜನರನ್ನು ಬಂಧಿಸಿ ಆಟಕ್ಕೆ ಬಳಸುತ್ತಿದ್ದ ಹನ್ನೆರಡು ಲಕ್ಷದ ಇಪ್ಪತ್ತ್ಮೂರು ಸಾವಿರ ನಗದು ಹಾಗೂ ಇಪ್ಪತ್ತಾರು ಮೊಬೈಲ್ ಮತ್ತು ಹನ್ನೆರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಜಾಮೀನು ಮೇಲೆ ಬಿಡಲಾಗಿದೆ. ದಾಳಿ ನಡೆಸಿದ ಪೊಲೀಸ್ ತಂಡದಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು .