ಉಡುಪಿ, ಏ 06(SM): ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆಯನ್ನು ಬಂಧಿಸಲಾಗಿದ್ದು, ನ್ಯಾಯಾಲಯ ಆತನಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಹೆಗ್ಡೆಯನ್ನು ಸಕಲೇಶಪುರದಲ್ಲಿ ಬಂಧಿಸಲಾಗಿದೆ.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ಲೈಯಿಂಗ್ ಸ್ಕ್ವಾಡ್-3ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಧು ಎನ್.ಎಂ. ಎಂಬವರು ಮಾರ್ಚ ೨೬ರಂದು ಯಡ್ತಾಡಿ ಗ್ರಾಮದ ಪರಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಸಾಹೇಬರಕಟ್ಟೆಯ ಸ್ವಾಗತ್ ಬಾರ್ & ರೆಸ್ಟೋರೆಂಟ್ನಲ್ಲಿ ರಶೀದಿ ರಹಿತವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಂತೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಈ ಸಂದರ್ಭ ನೌಕರ ಹರೀಶ ಕಾಂಚನ್ ಎಂಬುವವರನ್ನು ವಿಚಾರಿಸುತ್ತಿದ್ದಾಗ ಬಾರ್ ಮಾಲಕ ಯಾರಿಗೋ ಪೋನ್ ಮಾಡಿ ಬರಲು ಹೇಳಿದ್ದಾರೆ.
ಈ ಸಂದರ್ಭ ಅಲ್ಲಿಗೆ ಬಂದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಎಂದು ಪರಿಚಯಿಸಿಕೊಂಡ ವ್ಯಕ್ತಿ ನಿಮಗೆ ಬಾರ್ & ರೆಸ್ಟೋರೆಂಟ್ ಬಗ್ಗೆ ವಿಚಾರಿಸುವ ಅಧಿಕಾರ ಯಾರು ಕೊಟ್ಟಿದ್ದು. ಅದರ ಬಗ್ಗೆ ಇರುವ ಆದೇಶ ತೋರಿಸಿ, ನಿಮಗೆ ವಿಚಾರಣೆ ಮಾಡುವ ಯಾವುದೇ ಅಧಿಕಾರವಿಲ್ಲ. ನಿಮ್ಮ ಮೇಲೆ ಕೋರ್ಟ್ನಲ್ಲಿ ಕೇಸ್ ಹಾಕುತ್ತೇನೆ. ನಿಮ್ಮ ಮೇಲಾಧಿಕಾರಿಗಳಿಗೆ ಕಂಪ್ಲೆಂಟ್ ಮಾಡುತ್ತೇನೆ ಇಲ್ಲಿಂದ ಹೋಗಿ ಎಂದು ಜೋರಾಗಿ ಹೊರದಬ್ಬುವ ರೀತಿ ವರ್ತಿಸಿ ಚುನಾವಣಾ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅದರಂತೆ ಕೇಸು ದಾಖಲಿಸಿಕೊಂಡ ಬ್ರಹ್ಮಾವರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇದೀಗ ಆರೋಪಿಗೆ ಮಧ್ಯಂತರ ಜಾಮೀನು ನೀಡಿದೆ.