ಉಡುಪಿ, ಏ 06(SM): ಈ ಬಾರಿಯ ಲೋಕಸಭಾ ಚುನಾವಣೆಯು ಸತ್ಯ ಮತ್ತು ಅಸತ್ಯದ ನಡುವೆ ನಡೆಯುವ ಚುನಾವಣೆಯಾಗಿದೆ. ಬಿಜೆಪಿ ಸರಕಾರವು ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ವಿಧಾನ್ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಚುನಾವಣೆ ಸಂದರ್ಭದಲ್ಲಿ ಅಭಿವೃದ್ದಿಯ ಕುರಿತು ಚರ್ಚೆಗಳಾಗಬೇಕು. ಆದರೆ 17 ಮಂದಿ ಬಿಜೆಪಿ ಲೋಕಸಭಾ ಸದಸ್ಯರು ಯಾರೂ ಕೂಡಾ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ದಿಯನ್ನು ಮಾಡಿಲ್ಲ. ನಿಜವಾಗಿ ಅಭಿವೃದ್ದಿಯಾಗಿದೆಯಾದರೆ ಆ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.
ಇಂದು ಬಿಜೆಪಿಗರು ಮೋದಿಯ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ. ದೇಶದ ಸಂವಿಧಾನವನ್ನು ಉಳಿಸುವುದಕ್ಕಾಗಿ ಈ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ರಾಹುಲ್ ಗಾಂಧಿಯವರ ವಯನಾಡ್ ಸ್ಫರ್ಧೆಯ ಕುರಿತು ಪ್ರಧಾನಮಂತ್ರಿಗಳು ಅಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಓರ್ವ ಪ್ರಧಾನಿ ಹುದ್ದೆಯಲ್ಲಿರುವವರು ಇಂತಹ ಮಾತುಗಳನ್ನು ಹೇಳಬಾರದು. 5 ವರ್ಷಗಳ ಆಡಳಿತಾವಧಿಯಲ್ಲಿ ನೀವು ಯಾಕೆ ಅಲ್ಪಸಂಖ್ಯಾತರ ಅಭಿವೃದ್ದಿ ಮಾಡಿಲ್ಲ" ಎಂದು ಪ್ರಶ್ನಿಸಿದರು.