ಕಾರ್ಕಳ,ಏ07(AZM):ಕಾಂಗ್ರೆಸ್ ಪರ ಚುನಾವಣಾ ಪ್ರಚಾರಕ್ಕೆ ಕಾರ್ಕಳಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿಯವರು ಬಿಜೆಪಿ ಸರಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಕಾರ್ಕಳದ ಮಂಜುನಾಥ್ ಪೈ ಸಭಾಭವನದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿಯವರು, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ.ಮೋದಿ ಇಲ್ಲಾಂದ್ರೆ ದೇಶಕ್ಕೆ ರಕ್ಷಣೆ ಇಲ್ಲ ಅಂತ ಬಿಂಬಿಸಲಾಗ್ತಿದೆ ಎಂದು ಹೇಳಿದರು.ಕರಾವಳಿಯ ಮೂರು ಜಿಲ್ಲೆಗಳ ಜನರು ತಿಳುವಳಿಕೆ ಉಳ್ಳವರು, ಪ್ರಜ್ಞಾವಂತರು.ತಿಳುವಳಿಕ ಇರುವ ಜನರು ಯಾಕೆ ಬಿಜೆಪಿಯನ್ನು ಬೆಂಬಲಿಸುತ್ತೀರಿ ಎಂದು ಕೇಳಿದರು.
,ಇತ್ತೀಚೆಗೆ ಒಂದು ಶೋಕಿ ಆರಂಭವಾಗಿದ್ದು,ಯುವಕರು ರಸ್ತೆಯಲ್ಲಿ ಮೋದಿ ಎಂದು ಘೋಷಣೆ ಕೂಗುತ್ತಿದ್ದಾರೆ. ಅಂತಹ ಯುವಕರಿಗೆ ಮೋದಿ ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ನಾನು ಕರಾವಳಿ ಜನರ ಬಗ್ಗೆ ಯಾವತ್ತೂ ಲಘುವಾಗಿ ಮಾತಾಡಿಲ್ಲ ಎಂದ ಸಿಎಂ ಊರಿಗೆ ಶಾಲೆ ಬೇಕು ಅಂದ್ರೆ ಕುಮಾರಸ್ವಾಮಿ ಬೇಕು,ಆದ್ರೆ ಯುವಕರು ಮೋದಿಗೆ ವೋಟ್ ಹಾಕ್ತೀವಿ ಅಂತಾರೆ. ನಾನು ಹೀಗೆ ಕೇಳಿದ್ರೆ ತಪ್ಪಿದೆಯಾ ಎಂದು ಪ್ರಶ್ನಿಸಿದರು. ಮೋದಿ ಒಬ್ರೇ ದೇಶ ರಕ್ಷಣೆ ಮಾಡಬಲ್ಲರು ಅನ್ನುವವರು ವಾಜಪೇಯಿ ಈ ರಾಷ್ಡ್ರಕ್ಕೆ ಭದ್ರತೆ ಕೊಟ್ಟಿಲ್ವಾ ಎಂದೂ ಪ್ರಶ್ನಿಸಿದರು.
ಪುಲ್ವಾಮಾ ದಾಳಿ ಕುರಿತು ಮಾತನಾಡಿದ ಸಿಎಂ ಕುಮಾರಸ್ವಾಮಿ ಪುಲ್ವಾಮ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು ಎಂದು ನಾನು ಹೇಳಿಯೇ ಇಲ್ಲ.ಪುಲ್ವಾಮಾ ಹೆಸರನ್ನೇ ನಾನು ಹೇಳಿರಲಿಲ್ಲ. ಎರಡು ವರ್ಷದ ಹಿಂದೆ ನಿವೃತ್ತ ಅಧಿಕಾರಿಯೊಬ್ಬರು ಚುನಾವಣೆ ವೇಳೆ ಯುದ್ದದ ವಾತಾವರಣ ಬರುತ್ತದೆ ಎಂದು ಹೇಳಿದ್ದರು.ಅದ್ದನ್ನಷ್ಟೇ ನಾನು ಹೇಳಿದ್ದೆ. ಅಂತಹಾ ವಿವಾದಾಸ್ಪದ ಹೇಳಿಕೆಗೆ ನನ್ನ ಸಹಮತವಿಲ್ಲ. ನಾನು ಯಾವ ಬಾಂಬೂ ಹಾಕಿಲ್ಲ ಬಾಂಬ್ ಹಾಕುವ ಕೆಲಸ ಬಿಜೆಪಿಗೆ ಬಿಟ್ಟಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು