ಉಡುಪಿ, ಏ 07(SM): ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಅಮಾನತುಗೊಳಿಸಿರುವುದಕ್ಕೆ ಸಂಬಂಧಿಸಿ ಎಐಸಿಸಿ ಅಥವಾ ಕೆಪಿಸಿಸಿಯಿಂದ ಯಾವುದೇ ಪತ್ರ ಅಥವಾ ವಿವರಣೆ ಕೇಳಿ ಶೋಕಾಸ್ ನೋಟಿಸ್ ಬಂದಿಲ್ಲ. ನಾನು ರಾಜೀನಾಮೆಗೆ ಸಿದ್ಧವಾಗಿಯೇ ಈ ಹೋರಾಟಕ್ಕೆ ಇಳಿದಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಾನು ಇಂತಹ ಹೆಜ್ಜೆ ಏಕೆ ಇಟ್ಟೆ ಎಂಬುದನ್ನು ನನ್ನಿಂದ ತಿಳಿದುಕೊಳ್ಳುವ ಪ್ರಯತ್ನ ಹೈಕಮಾಂಡ್ ಮಾಡಬಹುದು ಎಂಬ ವಿಶ್ವಾಸ ಹೊಂದಿದ್ದೆ. ತಾಂತ್ರಿಕವಾಗಿ ನಾವು ತಪ್ಪು ಮಾಡಿದರೂ ನೈತಿಕವಾಗಿ ಸರಿ ಎಂಬ ಗೊಂದಲದಿಂದಾಗಿ ರಾಜೀನಾಮೆ ಕೊಡುವ ಅಂತಿಮ ನಿರ್ಧಾರವನ್ನು ನಾನು ಈವರೆಗೆ ಮಾಡಿರಲಿಲ್ಲ ಎಂದು ಅವರು ಹೇಳಿಕೆಯಲ್ಲಿ ಹೇಳಿದ್ದಾರೆ.
ಅಧಿಕೃತವಾಗಿ ಅಮಾನತು ಪತ್ರ ತಲುಪಿದರೆ ಪಕ್ಷದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ ದೊಡ್ಡ ವ್ಯಕ್ತಿಗಳಿಗೆ ಒಂದು ಕಾನೂನು, ಇತರರಿಗೆ ಇನ್ನೊಂದು ಕಾನೂನೇ ಎಂಬುಬದನ್ನು ಕೇಳ ಬಯಸುತ್ತೇನೆ. ನಾನು ಇದನ್ನು ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡುವುದು ದೂರದ ಮಾತು. ಯಾವುದೇ ಸಂದರ್ಭದಲ್ಲೂ ನಾನು ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿಲ್ಲ. ಅಲ್ಲದೆ ಪಕ್ಷಕ್ಕೆ ವಿರುದ್ಧವಾಗಿ ಮಾತನಾಡಿದ್ದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ನಿಂದ ಸ್ಪರ್ಧಿಸಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಕನಿಷ್ಠ ಎಚ್ಚರಿಕೆಯನ್ನೂ ಕೊಡದ ಹೈಕಮಾಂಡ್ ಇಷ್ಟು ವರ್ಷ ಪ್ರಾಮಾಣಿಕನಾಗಿ ಹೃದಯ ಮತ್ತು ಮನಸ್ಸು ಕೊಟ್ಟು ಪಕ್ಷಕ್ಕಾಗಿ ದುಡಿದ ನನ್ನನ್ನು ಏಕಾಏಕಿ ನೇರವಾಗಿ ಅಮಾನತು ಮಾಡಿದ ಕ್ರಮ ಸರಿಯೇ ಎಂಬುವುದಾಗಿ ಅವರು ಪ್ರಶ್ನಿಸಿದ್ದಾರೆ.