ಉಡುಪಿ, ಏ 08 (MSP): ಶಿರೂರು ಮಠದ ಹಿಂದಿನ ಪೀಠಾಧಿಪತಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಆದಯ ತೆರಿಗೆ ಇಲಾಖೆಯಿದ 17.34 ಕೋಟಿ ರೂ.ತೆರಿಗೆ ಮತ್ತು ಬಡ್ಡಿ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೆ ಮಠಕ್ಕೆ ಬರುತ್ತಿದ್ದ ವಾಣಿಜ್ಯ ಸಂಕೀರ್ಣದಿಂದ ಬರುತ್ತಿದ್ದ ಆದಾಯವನ್ನು ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ಶಿರೂರು ಮಠದಲ್ಲಿ ನಡೆದ ಶಿಷ್ಯ ವರ್ಗದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿ ವಿನಂತಿಸಿದ ಬಳಿಕ ಬಳಿಕ ಶೇ.80ರಷ್ಟು ಮೊತ್ತಕ್ಕೆ ತಡೆ ಲಭಿಸಿದ್ದು, ಬಳಿಕ ಶೇ.20ರಷ್ಟು ಮೊತ್ತವನ್ನು ತುರ್ತಾಗಿ ಪಾವತಿಸಲು ಸೂಚಿಸಿದ್ದಾರೆ ಎಂದರು. ಮಠದ ಮಣಿಪಾಲದಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ಬರುತ್ತಿದ್ದ ಆದಾಯ ತೆರಿಗೆ ಇಲಾಖೆ ಸುಪರ್ದಿಗೆ ಹೋಗುತ್ತಿದೆ. ಶಿರೂರು ಮಠ ಬೀಳುವ ಸ್ಥಿತಿಯಲ್ಲಿದ್ದು, ವಾಣಿಜ್ಯ ಸಂಕೀರ್ಣದಿಂದ ಬರುತ್ತಿದ್ದ ಆದಾಯದಿಂದ 25 ಲಕ್ಷ ಖರ್ಚು ಮಾಡಿ ಜೀರ್ಣೋದ್ದಾರ ಮಾಡಿದ್ದೇವೆ. ಮಠದ ಆದಾಯ ಕಡಿಮೆ ಇದೆ. ಮಠದ ಬ್ಯಾಂಕ್ ಖಾತೆಯಲ್ಲಿದ್ದ ೧೦ ಲಕ್ಷ ರೂಪಾಯಿಯನ್ನು ಬ್ಯಾಂಕ್ ನವರು ಮುಟ್ಟುಗೋಲು ಹಾಕಿದ್ದಾರೆ ಎಂದರು.
ಬಳಿಕ ಮಾತನಾಡಿದ ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ಶಿರೂರು ಮಠ ಶೇ.30 ಮತ್ತು ಖಾಸಗಿ ಕಂಪನಿ ಶೇ.70ರ ಒಡಬಂಡಿಕೆಯಲ್ಲಿ ಕನಕ ಮಾಲ್ ನಿರ್ಮಾಣಕ್ಕೆ ಹಿಂದಿನ ಸ್ವಾಮೀಜಿ ನಿರ್ಧರಿಸಿದ್ದರು. ಇದಕ್ಕೆ ಕಾರ್ಪೊರೇಶನ್ ಬ್ಯಾಂಕ್ ಮಣಿಪಾಲ ಶಾಖೆಯಲ್ಲಿ 25 ಕೋಟಿ ರೂ.ಸಾಲ ಮಾಡಲಾಗಿದ್ದು, 15 ಕೋಟಿ ರೂ.ಪಡೆದು ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಮುಂದುವರಿಯದ ಕಾರಣ ಉಳಿದ ಮೊತ್ತ ಪಾವತಿಗೆ ಬ್ಯಾಂಕ್ ನಿರಾಕರಿಸಿ, ಸಾಲ ಮೊತ್ತ ಮರುಪಾವತಿಗೆ ಆದೇಶಿಸಿತ್ತು. ಲಕ್ಷ್ಮೀವರ ತೀರ್ಥರು 5.75 ಕೋಟಿ ರೂ., ಜಯಕೃಷ್ಣ ಶೆಟ್ಟಿ 2.77 ಕೋಟಿ ರೂ. ಪಾವತಿಸಿದ್ದಾರೆ. ಈಗ ಉಳಿದ 7 ಕೋಟಿ ರೂ. ಅಸಲು ಪಾವತಿಸಲು ಸೋದೆ ಮಠ ಬದ್ಧವಾಗಿದ್ದು, ಶೀಘ್ರದಲ್ಲೇ ಬ್ಯಾಂಕ್ ಸಿಎಂಡಿ ಅವರನ್ನು ಭೇಟಿ ಮಾಡಲಾಗುವುದು. ಜತೆಗೆ ಅಂಗಡಿ ಪಡೆಯಲು ಮುಂಗಡ ಪಾವತಿಸಿದ 10 ಜನರಿಗೂನ್ಯಾಯ ಒದಗಿಸಲು ಮಠ ಬದ್ಧವಾಗಿದೆ ಎಂದು ತಿಳಿಸಿದರು.