ಮಂಗಳೂರು, ಎ08(SS): ಸದ್ಯ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಪ್ರಚಾರದ ಭರಾಟೆಯೂ ಜೋರಿದೆ. ಮತ್ತೂಂದೆಡೆ ರಾಜಕೀಯ ಪಕ್ಷಗಳ ಮುಖಂಡರಿಂದ ಧಾರ್ಮಿಕ ಕೇಂದ್ರಗಳ ಭೇಟಿಯೂ ಭರ್ಜರಿಯಾಗಿಯೇ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತಮ್ಮ ಎದುರಾಳಿಗಳನ್ನು ಸೋಲಿಸಲು ಹಲವು ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ.
ಈ ನಡುವೆ 100ಕ್ಕೂ ಮಿಕ್ಕಿ ಯುವಕರ ತಂಡವೊಂದು ಮಂಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ನಗರದ ಹಲವೆಡೆ ಕಳೆದ ಕೆಲವು ದಿನಗಳಿಂದ ಈ ಯುವಕರ ತಂಡ ಮಿಥುನ್ ರೈ ಪರ ಪ್ರಚಾರದಲ್ಲಿ ನಿರತವಾಗಿದೆ.
ಯುವಕರ ತಂಡ ಮನೆ ಮನೆ ಭೇಟಿ ನೀಡಿ, ಮಿಥುನ್ ರೈ ವಿದ್ಯಾವಂತ ಹಾಗೂ ಸುಸಂಸ್ಕೃತ ಕುಟುಂಬದ ಯುವಕ. ಮಂಗಳೂರಿನ ಸಮಗ್ರ ಅಭಿವೃದ್ದಿಗೆ ಮಿಥುನ್ ರೈ ಅತ್ಯುತ್ತಮ ಅಯ್ಕೆ. ಹಾಗಾಗಿ ಅವರನ್ನು ಪಕ್ಷಾತೀತವಾಗಿ ಮತದಾನ ಮಾಡಿ ಗೆಲ್ಲಿಸಬೇಕು ಎಂಬ ಬೇಡಿಕೆಯನ್ನು ಮತದಾರರ ಮುಂದಿಟ್ಟಿದ್ದಾರೆ.
ಈ ಹಿಂದೆ ನಡೆದಿದ್ದ ಲೋಕಸಭಾ ಚುಣಾವಣೆಯಲ್ಲಿ ಮೋದಿಯನ್ನು ಪ್ರಧಾನಿಯಾಗಿಸಬೇಕೆಂಬ ನಿಟ್ಟಿನಲ್ಲಿ ಕೆಲ ಯುವಕರು ನಮೋ ಬ್ರಿಗೇಡ್ ಎಂಬ ತಂಡ ಕಟ್ಟಿ ಪ್ರಚಾರ ನಡೆಸಿದ್ದರು. ಅದು ಭಾರಿ ಯಶಸ್ಸನ್ನು ತಂದು ಕೊಟ್ಟಿತ್ತು. ಈ ಬಾರಿ ಮತ್ತೊಂದು ಯುವಕರ ತಂಡ ಯುವ ನಾಯಕ ಮಿಥುನ್ ರೈ ಪರ ಪ್ರಚಾರಕ್ಕೆ ಧುಮುಕಿದೆ.