ಮಂಗಳೂರು, ನ 10: ಟಿಪ್ಪು ಸುಲ್ತಾನ್ ಓರ್ವ ವಿವಾದಾತ್ಮಕ ವ್ಯಕ್ತಿ. ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಇಂದು ಪೊಲೀಸ್ ಬೆಂಗಾವಲಿನಲ್ಲಿ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿಯ ಜೊತೆ ಮಾತನಾಡಿದ ಅವರು, ಇಸ್ಲಾಂನಲ್ಲಿ ಜಯಂತಿ ಆಚರಿಸುವ ಯಾವುದೇ ಸಂಪ್ರದಾಯವಿಲ್ಲ. ನಮ್ಮ ಧರ್ಮಕ್ಕೆ ಬೇಡವಾದ ಜಯಂತಿಯ ಮೇಲೆ ಸರಕಾರಕ್ಕೆ ಯಾಕೆ ಅತಿಯಾದ ಮೋಹ ಎಂದು ಪ್ರಶ್ನಿಸಿದರು.
ಪ್ರವಾದಿ ಮಹಮ್ಮದ್ ಅವರನ್ನು ಮುಸ್ಲಿಮರು ಗೌರವಿಸುವುದರ ಜೊತೆಗೆ ಹೃದಯಲ್ಲಿ ಇಟ್ಟು ಪೂಜಿಸುತ್ತಾರೆ. ಸುನ್ನಿಗಳನ್ನು ಬಿಟ್ಟರೆ ಪ್ರವಾದಿ ಮಹಮ್ಮದ್ ಅವರ ಜಯಂತಿಯನ್ನು ಯಾರೂ ಕೂಡ ಮಾಡುವುದಿಲ್ಲ. ಹೀಗಿರುವಾಗ ಟಿಪ್ಪು ಜಯಂತಿಯನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಹಿಂದು, ಕ್ರಿಶ್ಚಿಯನ್, ಜೈನ್ ಹೀಗೆ ಬೇರೆ ಬೇರೆ ಧರ್ಮಗಳಲ್ಲಿ ಜಯಂತಿ ಆಚರಣೆಯ ಸಂಪ್ರದಾಯವಿದೆ. ಬೇರೆ ಧರ್ಮದ ಸಂಪ್ರದಾಯವನ್ನು ಮುಸ್ಲಿಮರಾದ ನಾವು ಗೌರವಿಸುತ್ತೇವೆ. ಆದರೆ ವ್ಯಕ್ತಿ ಪೂಜೆ ನಮ್ಮಲಿಲ್ಲ. ಮೆರವಣಿಗೆ, ಫೋಟೊ ಇಟ್ಟು ಅದಕ್ಕೆ ಹಾರ ಹಾಕಿ ದೀಪ ಹಚ್ಚುವ ಯಾವುದೇ ಕ್ರಮ ನಮ್ಮಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಪವಿತ್ರ ಇಸ್ಲಾಂ ಧರ್ಮದಲ್ಲಿ ಅದೆಷ್ಟೋ ರಾಜರು ಉತ್ತಮ ಆಡಳಿತ ನಡೆಸಿದ್ದಾರೆ. ನಮಗೂ ಅನೇಕ ಮುಸ್ಲಿಂ ರಾಜರ ಬಗ್ಗೆ ಗೌರವವಿದೆ. ಹಾಗಂತ ಅವರ ಜಯಂತಿಯನ್ನು ನಾವಿಲ್ಲಿ ಆಚರಿಸುವುದಿಲ್ಲ. ಅವರಿಗಿಲ್ಲದ ಜಯಂತಿ ಟಿಪ್ಪು ಸುಲ್ತಾನನಿಗೂ ಬೇಡ ಎಂದು ಹೇಳಿದರು.