ಮಂಗಳೂರು, ಎ08(SS): ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಬದುಕನ್ನು ನೀಡಬೇಕು. ಅವರಿಗಾಗಿ ತಮ್ಮ ಅಮೂಲ್ಯ ಸಮಯವನ್ನು ಪ್ರತ್ಯೇಕವಾಗಿ ಇಡಬೇಕು. ಕೇವಲ ಮೊಬೈಲ್, ಟಿವಿ ಧಾರಾವಾಹಿಗಳಿಗೆ ಜೋತು ಬೀಳದೇ, ಮಕ್ಕಳ ಮಾತುಗಳಿಗೆ ಧ್ವನಿಯಾಗಿ, ಕಷ್ಟಗಳಿಗೆ ಸ್ಪಂದಿಸುತ್ತಾ ಅವರಿಗೆ ಮಾರ್ಗದರ್ಶನ ನೀಡಿ ಮುನ್ನಡೆಸಿ ಸಮಾಜಮುಖಿಯಾಗಿ ಬೆಳೆಸಿ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ನಾಗರತ್ನ ಸತೀಶ್ ಹೇಳಿದರು.
ಮಂಗಳೂರಿನ ಉರ್ವವೆಲ್ಸ್ ಪೇಟೆಯ ಶ್ರೀ ಬಬ್ಬು ಸ್ವಾಮಿ ಕ್ಷೇತ್ರದ ಆಶ್ರಯದಲ್ಲಿ ಉರ್ವ ವೆಲ್ಸ್ಪೇಟೆ ಕೋಡ್ದಬ್ಬು ದೈವಸ್ಥಾನದ ವಠಾರದಲ್ಲಿ ಶ್ರೀ ವೈದ್ಯನಾಥ ಮಹಿಳಾ ಮಂಡಳಿಯನ್ನು ಉದ್ಘಾಟನೆ ನಡೆಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತಮ ಸಮಾಜದ ನಿರ್ಮಾಣವಾಗಬೇಕಾದರೆ ಮಕ್ಕಳು ಚೆನ್ನಾಗಿ ಕಲಿಯಬೇಕು. ನಮ್ಮ ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕಾದರೆ ನಾವು ಅವರೊಂದಿಗೆ ಅವರ ನೋವು ನಲಿವುಗಳಿಗೆ ಸ್ಪಂದಿಸಿಕೊಂಡು ಹೋಗಬೇಕು. ನಾವೂ ಒಂದಷ್ಟು ತ್ಯಾಗವನ್ನು ಮಕ್ಕಳಿಗಾಗಿ ಮಾಡಬೇಕು. ಅವರ ದಿನನಿತ್ಯದ ಸಮಸ್ಯೆಗಳನ್ನು, ಎದುರಿಸುವ ಸವಾಲುಗಳನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಚಿಕ್ಕ ಚಿಕ್ಕ ಖುಷಿಗಳನ್ನು ನಾವು ಹುಡುಕಿದರೆ ನಾವು ದೊಡ್ಡ ಸಾಧನೆಯನ್ನು ಮಾಡಬಹುದು. ಅಪ್ಪ ಅಮ್ಮನ ತ್ಯಾಗ ಇದ್ದಾಗ ಮಾತ್ರ ಮಕ್ಕಳು ಕೂಡಾ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿ ವಿಶ್ವ ಹಿಂದೂ ಪರಿಷತ್ನ ಆಶಾ ಜಗದೀಶ್ ಮಾತನಾಡಿ, ಮಹಿಳೆಯರು ಸಾಮಾಜಿಕವಾಗಿ ಬೆಳೆಯಬೇಕು. ಯಾವುದೇ ಸಮಸ್ಯೆಗಳು ಎದುರಾದಾಗ ದಿಟ್ಟತನದಿಂದ ಎದುರಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಅವರು ಶ್ರೀ ವೈದ್ಯನಾಥ ಮಹಿಳಾ ಮಂಡಳಿಯ ಲಾಂಛನವನ್ನು ಅನಾವರಣಗೊಳಿಸಿದರು. ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಆರೋಗ್ಯ ಇಲಾಖೆಯ ರೋಹಿಣಿ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿನಿ ಕೀರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ದೈವಸ್ಥಾನದ ಗೌರವಾಧ್ಯಕ್ಷ ಡಾ. ಬಿ. ಜಿ ಸುವರ್ಣ, ಮಂಗಳೂರು ನಗರ ಪಾಲಿಕೆ ಮಾಜಿ ಉಪಮಹಾ ಪೌರೆ ಅಮಿತ ಕಲಾತಾರಾನಾಥ್, ಭಾರತೀ ಬಾಲಕೃಷ್ಣ, ಲತಾ ಜಯಂತ್, ಲೀಲಾವತಿ ಉಮೇಶ್ ಉಪಸ್ಥಿತರಿದ್ದರು. ರಘುರಾಜ್ ಕದ್ರಿ ಕಾರ್ಯಕ್ರಮ ನಿರೂಪಿಸಿ, ಸೌಮ್ಯ ವಂದಿಸಿದರು.