ಮಂಗಳೂರು, ನ 10: ಕೋಸ್ಟಲ್ ವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿದ್ದ ತುಳು ಚಲನಚಿತ್ರ ರಂಗ್ ರಂಗ್ ದ ದಿಬ್ಬಣ ಇದೀಗ ನಿರೀಕ್ಷೆಗೂ ಮೀರಿ ಕಲಾವಿದರ ಮನಗೆದ್ದಿದೆ. ಶರತ್ ಕೋಟ್ಯಾನ್ ನಿರ್ಮಾಣದ ಈ ಚಿತ್ರ ಬೆಳ್ಳಿ ತೆರೆ ಮೇಲೆ ಅಪ್ಪಳಿಸಿದ್ದು, ಪ್ರೇಕ್ಷಕರಿಗೆ ಮನರಂಜನೆಯ ಜತೆಗೆ ಉತ್ತಮ ಸಂದೇಶ ನೀಡಿದೆ.
ಬಾಲಿವುಡ್ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ರಂಗ್ರಂಗ್ದ ದಿಬ್ಬಣ ಸಿ-ಟೌನ್ ನಲ್ಲಿ ಸದ್ದು ಮಾಡುತ್ತಿದ್ದು, ತುಳು ಚಿತ್ರ ರಂಗಕ್ಕೆ ಅಪಾರ ಗೌರವ ತಂದುಕೊಟ್ಟಿದೆ. ಯಾಕಂದರೆ ರಂಗ್ರಂಗ್ದ ದಿಬ್ಬಣದ ಕಥೆ, ಚಿತ್ರಕಥೆ ಮತ್ತು ತಂತ್ರಜ್ಞಾನ ಉಳಿದೆಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿ ಮೂಡಿಬಂದಿದ್ದು ಎಲ್ಲೂ ನಿರಾಸೆಯನ್ನು ಮಾಡದೇ ಚಿತ್ರದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಕರಾವಳಿಯ ಉದಯೋನ್ಮುಖ ಪ್ರತಿಭೆಗಳು ಸೇರಿಕೊಂಡು ತೆರೆ ಮೇಲೆ ತಂದಿರುವ ಈ ಚಿತ್ರದಲ್ಲಿ ಕಾಲೇಜು ಹುಡುಗರು ಪ್ರೀತಿ ಪ್ರೇಮದ ಬಲೆಗೆ ಬಿದ್ದು ಆ ಬಳಿಕ, ಅಲ್ಲಿ ನಡೆಯುವ ಅವಾಂತರಗಳನ್ನು ಬಿಚ್ಚಿಡುವ ಅಪರೂಪದ ಪ್ರೇಮ ಕಥೆಯನ್ನು ರಂಗ್ರಂಗ್ದ ದಿಬ್ಬಣ ಎಳೆಎಳೆಯಾಗಿ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದೆ. ಜೊತೆಗೆ ಮನರಂಜನೆಯ ಕಥೆಯ ಮೂಲಕ ಉತ್ತಮ ಸಂದೇಶವನ್ನು ಚಿತ್ರತಂಡ ಸಮಾಜಕ್ಕೆ ನೀಡಿದೆ.
ತುಳುಚಿತ್ರರಂಗದ ಭರವಸೆಯ ನಿರ್ದೇಶಕ ಕೃಷ್ಣಪ್ರಸಾದ್ ಉಪ್ಪಿನಕೋಟೆ ಅವರ ಚೊಚ್ಚಲ ಚಿತ್ರ ಇದಾಗಿದ್ದು, ತೆರೆಯ ಮೇಲೆ ಕಥೆ ಅದ್ಭುತವಾಗಿ ಮೂಡಿಬಂದಿದೆ. ಖ್ಯಾತ ಸಂಗೀತ ನಿರ್ದೇಶಕ ಎಸ್.ಪಿ. ಚಂದ್ರಕಾಂತ್ ಅವರ ನವಿರಾರ ಹಾಡುಗಳು ಚಿತ್ರದಲ್ಲಿದ್ದು, ಸಂಗೀತ ಪ್ರಿಯರ ಮನ ತಣಿಸಿದೆ. ಈಗಾಗಲೇ ಚಿತ್ರದ ಆರು ಹಾಡುಗಳು ಸೂಪರ್ ಹಿಟ್ ಆಗಿದ್ದು, ಪಚ್ಚೆ ಕುರಲ್ದ ಪಜ್ಜಿ ಕಮ್ಮೆನ ಹಾಡು ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.
ರಂಗ್ರಂಗ್ದ ದಿಬ್ಬಣ ಚಿತ್ರದ ಕೊನೆಯವರೆಗೂ ಹಾಸ್ಯ ಇದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ. ಕರಾವಳಿಯ ಹಾಸ್ಯ ದಿಗ್ಗಜರಾದ ಉಮೇಶ್ ಮಿಜಾರ್, ದಿನೇಶ್ ಅತ್ತಾವರ್, ರಾಘವೇಂದ್ರ ರೈ, ರಂಜನ್ ಬೋಳೂರು, ಆರ್ ಜೆ ರೂಪೇಶ್, ರಘು ಪಾಂಡೇಶ್ವರ್ ಸೇರಿದಂತೆ ಅನೇಕ ನಟರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.
ಚೆಲುವಿನ ಚಿತ್ತಾರ ಚಿತ್ರದ ಖ್ಯಾತ ಛಾಯಾಗ್ರಾಹಕ ರೇಣುಕುಮಾರ್ ಅವರ ಛಾಯಾಗ್ರಾಹಣ ಚಿತ್ರಕ್ಕಿದ್ದು, ಮಾಸ ಮಾದ ಅವರು ಚಿತ್ರದ ಸಾಹಸ ನಿರ್ದೇಶಕರಾಗಿದ್ದಾರೆ. ಚಿತ್ರದಲ್ಲಿ ಕಿಶೋರ್ ಮೂಡಬಿದ್ರಿ, ರಂಜಿತ್ ಸುವರ್ಣ ಸಹನಿರ್ದೇಶಕರಾಗಿದ್ದು, ಮಧು ಸುರತ್ಕಲ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ರಂಗ್ರಂಗ್ದ ದಿಬ್ಬಣ ಚಿತ್ರದಲ್ಲಿ ರವಿರಾಜ್ ಶೆಟ್ಟಿ, ಪ್ರಶಾಂತ್ ಸಾಮಗ ನಾಯಕ ನಟರಾಗಿ ಅಭಿನಯಿಸಿದ್ದು ಪ್ರೇಕ್ಷಕರಿಂದ ಭೇಷ್ ಅನಿಸಿಕೊಂಡಿದ್ದಾರೆ. ನಾಯಕಿಯರಾಗಿ ಸ್ವಾತಿ ಬಂಗೇರ ಮತ್ತು ಸಂಹಿತಾ ಶಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು ಮುದ್ದಾದ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಕಥೆ, ಚಿತ್ರಕಥೆ ಮತ್ತು ತಂತ್ರಜ್ಞಾನದ ಕೈಚಳಕದಿಂದ ತೆರೆ ಮೇಲೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿರುವ ರಂಗ್ರಂಗ್ದ ದಿಬ್ಬಣ ಸಿನಿಮಾ ಒಂದೇ ವಾರದಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳನ್ನು ಪಡೆದುಕೊಂಡಿದೆ. ಯುವಜನತೆಗೆ ಉತ್ತಮ ಸಂದೇಶ ನೀಡುವ ಈ ಸಿನಿಮಾ ಕರಾವಳಿ ಸೇರಿದಂತೆ 14 ಚಿತ್ರಮಂದಿರಗಳಲ್ಲಿದ್ದು, ಕುಟುಂಬ ಸಮೇತರಾಗಿ ಹೋಗಿ ನೋಡಬಹುದಾದ ಉತ್ತಮ ಚಿತ್ರವಾಗಿದೆ.