ಕೋಟಾ, ನ 11: 34 ಗಂಟೆಗಳಲ್ಲಿ 1174.28 ಮೀಟರ್ ಉದ್ದದ ಚಿತ್ರವನ್ನು 10 ಸೆಂಟಿ ಮೀಟರ್ ಪೇಪರ್ ರೋಲ್ನಲ್ಲಿ ಬಿಡಿಸುವ ಮೂಲಕ ನೂತನ ದಾಖಲೆ ಮಾಡಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿರುವ ಹೆಮ್ಮೆಯ ಸಂಗತಿ ಕುಂದಾಪುರದಲ್ಲಿ ನಡೆದಿದೆ.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರದೀಶ್ ಕೆ. ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿರುವ ಯುವ ಪ್ರತಿಭೆ. ಇವರ ಕುಂಚದಲ್ಲಿ ಅರಳಿರುವ ಈ ಚಿತ್ರಕ್ಕೆ ಗಿನ್ನಿಸ್ ಸಂಸ್ಥೆಯ ಅಧೀಕೃತ ಘೋಷಣೆಯಷ್ಟೆ ಬಾಕಿ ಉಳಿದಿದೆ.
ಕಾಲೇಜಿನ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನವೆಂಬರ್ 7 ರಿಂದ ಆರಂಭಿಸಿ 10 ರವರೆಗೆ ಲಾಂಗೆಸ್ಟ್ ಡ್ರಾಯಿಂಗ್ ಬೈ ಆನ್ ಇನ್ಡಿವಿಜುವಲ್ ಹೆಸರಿನಲ್ಲಿ ಸ್ವಚ್ಛ ಭಾರತ್ ಕಲ್ಪನೆಯಲ್ಲಿ ಸುಮಾರು ೧೦೦೦ ಮೀಟರ್ ಚಿತ್ರ ರಚಿಸುವ ಗಿನ್ನಿಸ್ ವಲ್ಡ್ ರೆಕಾರ್ಡ್ ಸ್ಫರ್ಧೆ ನಡೆದಿದ್ದು, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿರುವ ಪ್ರದೀಶ್ ಕೆ. ಸ್ಫರ್ಧೆಯಲ್ಲಿ ಭಾಗವಹಿಸಿ ಚಿತ್ರ ರಚನೆ ಆರಂಭಿಸಿದ್ದರು. ಮೊದಲನೆಯ ದಿನದಂದು ಭವ್ಯ ಭಾರತ ಹೆಸರಿನಲ್ಲಿ ಈ ಹಿಂದೆ ಹಸಿರು ಹಸಿರಾಗಿದ್ದ ಭಾರತದ ಚಿತ್ರ ರಚನೆ ಮಾಡಿದರೆ, ಎರಡನೆಯ ದಿನ ಭಾರತ ಇಂದಿನ ದಿನಗಳಲ್ಲಿ ಹೇಗೆ ಕಲುಷಿತವಾಗುತ್ತಿದೆ ಎನ್ನುವ ಕುರಿತು ಕಲುಷಿತ ಭಾರತ ಹೆಸರಿನಲ್ಲಿ ಚಿತ್ರ ರಚಿಸಿದ್ದನು. ಮೂರನೇಯ ದಿನ ಸ್ವಚ್ಛ ಭಾರತ ಹೇಗಿದೆ ಎನ್ನುವ ಕಲ್ಪನೆಯನ್ನು ತನ್ನ ಚಿತ್ರದ ಮೂಲಕ ಮೂಡಿಸಿದ್ದು, 4 ನೇ ದಿನದಂದು ಅಭಿವೃದ್ಧಿ ಭಾರತದ ಕಲ್ಪನೆಯನ್ನು ಚಿತ್ರಿಸಿದ್ದನು.
ಚಿತ್ರ ರಚನೆ ಬಳಿಕ ಕಾಲೇಜಿನ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಗ್ರೀನ್ ನೆಟ್ ಮೇಲೆ ಪ್ರದೀಶ್ ಕೆ. ರಚಿಸಿದ ಸುಮಾರು 24 ಮತ್ತು ಅರ್ಧ ರೋಲ್ಗಳಲ್ಲಿ ಚಿತ್ರವನ್ನು ಸಾಲಾಗಿ ಜೋಡಿಸಲಾಯಿತು. ಬಳಿಕ ನಿರಂತರ ವಿಡಿಯೋ ರೇಕಾರ್ಡ್ ನಡೆಸಿ, ಚಿತ್ರದ ಉದ್ದವನ್ನು ಅಳೆದಿದ್ದು, ಈ ಚಿತ್ರ 1174.28 ಮೀಟರ್ ಉದ್ದವಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಚೆನೈ ಮೂಲದ ಪರಿಮಳಕಾಂತ್ ಕುಮಾರ ವಿಜಯನ್ ಎಂಬುವವರು 2016 ರ ಅಕ್ಟೋಬರ್ 12 ರಂದು ಸುಮಾರು 660.22 ಮೀಟರ್ ಉದ್ದದ ಚಿತ್ರ ರಚಿಸಿ ಗಿನ್ನಿಸ್ ದಾಖಲೆಯ ಪುಟ ಸೇರಿದ್ದರು. ಇದೀಗ ಪ್ರದೀಶ್ ಕೆ. ಅತೀ ಉದ್ದದ ಚಿತ್ರ ಬಿಡಿಸಿ ಗಿನ್ನಿಸ್ ದಾಖಲೆಯ ಪುಟ ಸೇರಲಿದ್ದಾರೆ. ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಆಂದೋಲನವನ್ನು ತನ್ನ ಗಿನ್ನಿಸ್ ದಾಖಲೆಗೆ ಥೀಂ ಆಗಿ ಆರಿಸಿಕೊಂಡಿದ್ದ ಪ್ರದೀಶ್ ಸಾಕಷ್ಟು ಪೂರ್ವ ತಯಾರಿಯೊಂದಿಗೆ ಕಣಕ್ಕೆ ಇಳಿದಿದ್ದನು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧನೆಯ ಶ್ರಮಕ್ಕೆ ಇದೀಗ ಪ್ರದೀಶ್ ಅವರಿಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.