ಮಂಗಳೂರು, ನ 11: ಹಿಂದೂ ಕಾರ್ಯಕರ್ತರ ಕೊಲೆಯಾಗಿರುವುದು ಬಿಜೆಪಿ ನಾಯಕರಿಂದಲೇ ಎಂದು ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಹೇಳಿ ವೇದಿಕೆಯಲ್ಲಿ ಎಡವಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಂಸದ ಶ್ರೀರಾಮುಲು, ಶೋಭಾ ಕರಂದ್ಲಾಜೆ, ಬಿ.ಎಸ್ ಯಡಿಯೂರಪ್ಪ ಮತ್ತು ಸದಾನಂದ ಗೌಡ ಅವರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವಂತಹ ಕೆಲಸ ಮಾಡಿದ್ದಾರೆ. ಇದನ್ನು ನೀವೆಲ್ಲರೂ ನೋಡಿದ್ದೀರಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ಯಾವುದೋ ವಿಷಯವನ್ನು ಹೇಳಲು ಹೋಗಿ ತಪ್ಪಾಗಿ ಮಾತನಾಡಿರುವ ಶ್ರೀರಾಮುಲು ಅವರ ಮಾತು ಕೇಳಿ ವೇದಿಕೆಯಲ್ಲಿ ಇದ್ದವರು ಒಮ್ಮೆಗೆ ಶಾಕ್ ಆದ ಪ್ರಸಂಗ ನಡೆದಿದೆ.
ಕರಾವಳಿಯ ಕೊಲೆ ರಾಜಕೀಯದ ಬಗ್ಗೆ ಮಾತನಾಡುತ್ತಿರುವ ವೇಳೆ ಸಂಸದ ಶ್ರೀ ರಾಮುಲು ಅವರು ಬಾಯಿ ತಪ್ಪಿ ಎಡವಟ್ಟು ಮಾಡಿಕೊಂಡಿದ್ದಾರೆ. ಕೆಲವೇ ಕ್ಷಣದಲ್ಲಿ ಎಚ್ಚೆತ್ತುಕೊಂಡ ಶ್ರೀರಾಮುಲು ಕರ್ನಾಟಕದಲ್ಲಿ ಜಾತಿ ವಿಭಜನೆ ಮಾಡುವ ಹಾಗೂ ಆರ್ಎಸ್ಎಸ್, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.