ಉಡುಪಿ,ಏ10(AZM): ಇಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕರಾದ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮರಳು ಹೋರಾಟ ಸಮಿತಿ ಅವರ ಜೊತೆ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕಾರ ಮಾಡದಂತೆ ಮನವರಿಕೆ ಮಾಡಿ ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರಾದ ರಘುಪತಿ ಭಟ್,ಮರಳು ಸಮಸ್ಯೆಯಿಂದ ಬಳಲುತ್ತಿದ್ದ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಯಾಕೆಂದರೆ ಚುನಾವಣೆ ಮುಗಿದ ತಕ್ಷಣ ಮರಳುಗಾರಿಕೆಗೆ ಅವಕಾಶ ನೀಡುವುದಾಗಿ ಸ್ವತಃ ಜಿಲ್ಲಾಧಿಕಾರಿಗಳು ಹೇಳಿಕೊಂಡಿದ್ದಾರೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದಿಂದ ಇದಕ್ಕೆ ಬೇಕಾದ ಅನುಮತಿ ಪಡೆದಿದ್ದು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ 7 ಸದಸ್ಯರ ನಿಯೋಗದ ಜೊತೆ ಸಭೆ ನಡೆಸಿ 7.80 ಲಕ್ಷ ಮೆಟ್ರಿಕ್ ಟನ್ ಮರಳು ವಿತರಣೆ ಮಾಡುವಂತದ್ದು ಮಾತ್ರ ಬಾಕಿ ಇದೆ. ಸದ್ಯ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
ಎಪ್ರಿಲ್ 19 ರಂದು ಇದಕ್ಕೆ ಸಂಬಂಧಿಸಿದಂತೆ ಮರಳುಗಾರಿಕೆಗೆ ಅವಕಾಶ ನೀಡದೇ ಇದ್ದಲ್ಲಿ ಮತ್ತೊಮ್ಮೆ ಪ್ರತಿಭಟನೆ ಮಾಡುವುದಾಗಿ ಶಾಸಕರಾದ ಕೆ ರಘುಪತಿ ಭಟ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ನಿರ್ಧರಿಸಲಾಯಿತು. ಆದ್ದರಿಂದ ಮತದಾರರು ಯಾವುದೇ ಗೊಂದಲಕ್ಕೆ ಒಳಗಾಗದೆ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕೆಂದು ವಿನಂತಿಸಲಾಯಿತು.
.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ದಿನಕರ ಬಾಬು ಹಾಗೂ ಮರಳು ಹೋರಾಟ ಸಮಿತಿಯ ಪದಾಧಿಕಾರಿಗಳಾದ ಲೋಕೇಶ್ ಮೆಂಡನ್, ಶ್ಯಾಮ್ ಕುಂದರ್, ಭಾಸ್ಕರ ಶೆಟ್ಟಿ, ಪ್ರವೀಣ್ ಸುವರ್ಣ, ಸತ್ಯರಾಜ್ ಬಿರ್ತಿ, ಚಂದ್ರ ಪೂಜಾರಿ, ರಾಘವೇಂದ್ರ ಶೆಟ್ಟಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.