ಮಂಗಳೂರು, ಏ 11 (MSP): 'ರಫೇಲ್ ಅಂದ್ರೆ ರಾಹುಲ್, ಹೀಗಾಗಿ ರಫೇಲ್ ಗೂ ಬಿಜೆಪಿಗೂ ಸಂಬಂಧವಿಲ್ಲ' ಎಂದು ಬಿಜೆಪಿ ವಕ್ತಾರೆ, ತಾರಾ ಪ್ರಚಾರಕಿ ಮಾಳಾವಿಕ ಅವಿನಾಶ್ ವ್ಯಂಗ್ಯವಾಡಿದ್ದಾರೆ.
ಏ.11 ರ ಗುರುವಾರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, " ಸುಪ್ರೀಂ ಕೋರ್ಟ್ ಎಲ್ಲೂ ರಫೇಲ್ ಒಪ್ಪಂದವನ್ನು ಹಗರಣ ಎಂದು ಹೇಳಲಿಲ್ಲ. ಭಾರತದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುವ ರಫೇಲ್ ಒಪ್ಪಂದ ವಿಷಯವಾಗಿ ಸಿಐಜೆ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ. ಆದರೆ ರಾಹುಲ್ ರಫೇಲ್ ನನ್ನು ಬಿಡಲೊಲ್ಲರು. ಹೀಗಾಗಿ ರಾಹುಲ್ ನ ರಫೇಲ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಎಲ್ಲೂ ರಫೇಲ್ ಒಪ್ಪಂದವನ್ನು ಹಗರಣ ಎಂದು ಹೇಳಿಲ್ಲ, ಬದಲಾಗಿ ಕೆಲ ಕಡತಗಳ ಬಗ್ಗೆ ಮಾಹಿತಿಯನ್ನು ಕೇಳಿರುವುದಷ್ಟೇ. ಆದರೆ ರಾಹುಲ್ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೋರ್ಟ್ ಅಭಿಪ್ರಾಯದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ರಾಹುಲ್ ಅವರ ವೈಫಲ್ಯವನ್ನು ಮರೆಮಾಚಲು ರಫೇಲ್ ನ್ನು ಉಪಯೋಗಿಸುತ್ತಿದೆ. ಜನರಿಗೆ ಈ ವಿಚಾರವಾಗಿ ಚೆನ್ನಾಗಿ ತಿಳುವಳಿಕೆ ಇದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಐದು ವರ್ಷದ ಮೊದಲು ಅಧಿಕಾರಕ್ಕೆ ಬಂದಾಗ ತಮ್ಮ ಕಾರ್ಯವೈಖರಿ ಬಗ್ಗೆ ಅಂಕಪಟ್ಟಿ ಸಿದ್ದಪಡಿಸಿ ಜನರಲ್ಲಿ ಬರುತ್ತೇನೆ ಎಂದು ಹೇಳಿದ್ದರು. ಇದೀಗ ಅಂಕಪಟ್ಟಿಗೆ ದೇಶವಾಸಿಗಳೊಂದಿಗೆ ಅಂಕ ನೀಡುವಂತೆ ಕೇಳಿಕೊಂಡಿದ್ದಾರೆ. ಜನರು ಪೂರ್ಣ ಪ್ರಮಾಣದ ಅಂಕಗಳನ್ನು ನೀಡಲು ಸಿದ್ದರಾಗಿದ್ದಾರೆ. ಮುಂದಿನ ಐದು ವರ್ಷಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಆಡಳಿತದಲ್ಲಿ ಭಾರತವು ವಿಶ್ವಗುರು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.