ಕಡಬ, ಎ11(SS): ಇಲ್ಲಿರುವ ದೇವಾಲಯಗಳಿಂದ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಜೀವಂತವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಹಳೆನೇರೆಂಕಿ ಗ್ರಾಮದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವ ಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಅಶೀರ್ವಚನ ನೀಡಿ ಮಾತನಾಡಿದ ಅವರು, ದೇಶದ ಮೇಲೆ ಹಲವು ಆಕ್ರಮಣಗಳು ನಡೆದಿವೆ. ಆದರೂ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಜೀವಂತವಾಗಿದೆ. ಇದಕ್ಕೆ ದೇವಾಲಯಗಳೇ ಕಾರಣ ಎಂದು ಹೇಳಿದ್ದಾರೆ.
ನೀರನ್ನು ಕೊಂಬೆಗಳಿಗೆ ಹಾಕಿದರೆ ಆದರಿಂದ ಏನೂ ಪ್ರಯೋಜನವಿಲ್ಲ. ಬೇರುಗಳಿಗೆ ನೀರು ಹಾಕಿದಲ್ಲಿ ಕೊಂಬೆಗಳಲ್ಲಿ ಫಲ ಬರಲಿದೆ. ಭಗವಂತ ಜಗತ್ತಿನ ಬೇರು. ಭಗವಂತನ ಮೇಲೆ ಭಕ್ತಿಯ ನೀರೆರೆದಲ್ಲಿ ಮನೆ ಮನೆಗಳಲ್ಲೂ ಸುಖ, ಸಮೃದ್ಧಿಯಾಗಲು ಸಾಧ್ಯವಿದೆ ಎಂದು ಹೇಳಿದರು.
ಭಗವಂತ ಕಣ್ಣಿಗೆ ಕಾಣಿಸದಿದ್ದರೂ ಅವನ ಶಕ್ತಿ ಎಲ್ಲೆಡೆಯೂ ವ್ಯಾಪಿಸಿದೆ. ನಮ್ಮಲ್ಲಿ ಭಗವಂತನ ಪ್ರಜ್ಞೆ ನಿರಂತರ ಜಾಗೃತವಾಗಿರಬೇಕು. ಇದಕ್ಕೆಂದೇ ಹಿರಿಯರು ಪ್ರತಿ ಊರಿನಲ್ಲೂ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ನಮ್ಮ ಧರ್ಮ ಸಂಸ್ಕೃತಿಯ ರಕ್ಷಣೆಯಾಗುತ್ತಿದೆ ಎಂದು ತಿಳಿಸಿದರು.