ಉಡುಪಿ,ಏ 11 (MSP): ಚುನಾವಣಾ ಸಂದರ್ಭದಲ್ಲಿ, ಚುನಾವಣೆ ಕರ್ತವ್ಯಕ್ಕೆ ಕರೆ ಬಂದಿದೆ ಎಂದರೆ ಸಾಕು, ನೌಕರರಲ್ಲಿ ನಡುಕ ಪ್ರಾರಂಭವಾಗುತ್ತದೆ, ನೇಮಕ ಆದೇಶ ಬಂದ ಕೂಡಲೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು, ವೈದ್ಯರ ಪ್ರಮಾಣಪತ್ರ ಪಡೆದುಕೊಂಡು ಬಂದು ಕರ್ತವ್ಯದಿಂದ ಚುನಾವಣಾ ಕರ್ತವ್ಯಕ್ಕೆ ನೇಮಿಸಬಾರದೆಂದು ಕೋರಿ , ಅಧಿಕಾರಿಗಳ ಮುಂದೆ ಕ್ಯೂ ನಿಲ್ಲುವುದು ಪ್ರತಿ ಬಾರಿ ಸಾಮಾನ್ಯ.
ಆದರೆ ಇಲ್ಲೊಬ್ಬ ಸಿಬ್ಬಂದಿಯಿದ್ದಾರೆ, ಚುನಾವಣೆ ಬಂತೆಂದರೆ ಇವರಿಗೆ ಬಿಡುವಿಲ್ಲದ ಕೆಲಸ, ಯಾವುದೇ ಬೇಸರವಿಲ್ಲದೆ, ಚುನಾವಣೆಗೆ ಸಂಬಂದಿಸಿದ ಯಾವುದೇ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾರೆ, ಅವರೇ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ಡಿ ಗ್ರೂಫ್ ಸಿಬ್ಬಂದಿ ವಿಶ್ವನಾಥ ಶೆಟ್ಟಿ. ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗುವ ಸಿಬ್ಬಂದಿ ಇಡೀ ಸೇವಾವಧಿಯಲ್ಲಿ ಸುಮಾರು 10 ರಿಂದ 15 ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಬಹುದು, ಅದೂ ಪ್ರತಿ ಚುನಾವಣೆಗೆ ಕೇವಲ 2 ದಿನ. ಆದರೆ ವಿಶ್ವನಾಥ ಶೆಟ್ಟಿ ಇವರು ಸೇವೆಗೆ ಸೇರಿ ಪ್ರಸ್ತುತ 18 ವರ್ಷದಲ್ಲಿ ಸುಮಾರು 80 ಕ್ಕೂ ಅಧಿಕ ಚುನಾವಣೆಯಲ್ಲಿ , ಚುನಾವಣಾ ಪ್ರಕ್ರಿಯೆ ಆರಂಭದಿಂದ , ಮತದಾನ ಮುಗಿದು, ಫಲಿತಾಂಶ ಘೋಷಣೆಯಾಗಿ, ಚುನಾವಣಾ ಪ್ರಕಿಯೆ ಮುಗಿಯುವ ವರೆಗೂ ಕರ್ತವ್ಯ ನಿರ್ವಹಿಸುತ್ತಾರೆ.
ಚುನಾವಣಾ ಸಂದರ್ಭದಲ್ಲಿ ಸದಾ ಬ್ಯುಸಿಯಾಗಿ, ಸಮಯದ ಮಿತಿಯಿಲ್ಲದೇ , ಕೆಲಸದ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಇವರು ಯಾವುದೆ ಕೆಲಸ ಹೇಳಿದರೂ ಬೇಸರಗೊಳ್ಳದೆ , ತಮಗೆ ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಚುನಾವಣಾ ಶಾಖೆಯಲ್ಲಿ ವಿವಿಧ ಪತ್ರಗಳನ್ನು ಸಂಬಂದಪಟ್ಟವರಿಗೆ ತಲುಪಿಸುವುದು, ಜೆರಾಕ್ಸ್ ಕಾರ್ಯ, ಚುನಾವಣೆಗೆ ಸಂಬಧಿಸಿದ ಕಡತಗಳ ಜೋಡಣೆ, ಚುನಾವಣಾ ಕಾರ್ಯಕ್ಕೆ ಬರುವ ಸಾಮಗ್ರಿಗಳ ಶೇಖರಣೆ, ವಿತರಣೆ, ಮತ ಎಣಿಕಾ ಕೇಂದ್ರದಲ್ಲಿನ ಅಗತ್ಯ ಕಾರ್ಯಗಳನ್ನು ಇವರು ನಿರ್ವಹಿಸುತ್ತಾರೆ.
2001 ರಲ್ಲಿ ರೂ.900 ವೇತನಕ್ಕೆ ಗ್ರಾಮ ಸಹಾಯಕರಾಗಿ ಸೇರಿದ ಇವರು, ಇದುವರೆಗೂ ಜಿಲ್ಲೆಯಲ್ಲಿನ ಗ್ರಾಮ ಪಂಚಯತ್, ತಾಲೂಕು ಪಂಚಾಯತ್, ನಗರಸಭೆ, ಪುರಸಭೆ, ವಿಧಾನಸಭೆ, ವಿಧಾನ ಪರಿಷತ್, ಎಪಿಎಂಸಿ ಚುನವಣೆ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.
ಮತದಾನ ಪವಿತ್ರ ಕರ್ತವ್ಯ , ಮತದಾನವು ಪ್ರಜಾಪ್ರಭುತ್ವ ಯಶಸ್ಸು ಎಂದು ಹೇಳುವುದನ್ನು ಕೇಳಿರುವ ಇವರು , ನಾವು ಚುನಾವಣೆಗಾಗಿ ಎಷ್ಟೆಲ್ಲಾ ಪಡುತ್ತೇವೆ, ಇದರ ಉದ್ದೇಶ ಒಂದೇ ಯಾವುದೇ ಹಂತದಲ್ಲೂ ಚುನಾವಣಾ ಕಾರ್ಯದಲ್ಲಿ ತೊಂದರೆಯಾಗಬಾರದು ಎಂದು , ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ಇವರು, ಸುಗಮ ಚುನಾವಣೆಗೆ ನನ್ನಿಂದ ಕೈಲಾದಷ್ಟು ಸೇವೆ ಸಲ್ಲಿಸುವ ಭಾಗ್ಯ ದೊರೆತಿರುವುದೇ ನನಗೆ ಹೆಮ್ಮ ಎನ್ನುವ ಇವರು, ಈ ಹಿಂದೆ ಚುನಾವಣಾ ಸಾಮಗ್ರಿಗಳನ್ನು ತರಲು ಬೆಂಗಳೂರಿಗೆ ತೆರಳಬೇಕಾಗಿತ್ತು, ಆದರೆ ಈಗ ಇಲ್ಲಿಗೆ ಬರುತ್ತಿದೆ , ಹಿಂದೆ ಮತಪತ್ರ ಎಣಿಕೆ ಸಮಯದಲ್ಲಿ ಬೆಳಗಿನ ಜಾವದವರೆಗೂ ಕರ್ತವ್ಯ ನಿರ್ವಹಿಸಿದ್ದೇನೆ, ಈಗ ಇವಿಎಂ ಬಂದ ಕಾರಣ ಮತದಾನ ಸುಲಭವಾಗಿದೆ ಎಂದು ಹೇಳಿದ ವಿಶ್ವನಾಥ ಶೆಟ್ಟಿ, ತನ್ನ ಬಿಡುವಿಲ್ಲದ ಕಾರ್ಯದಲ್ಲಿಯೂ ಇಷ್ಟು ಹೇಳಿ, ಅಧಿಕಾರಿಗಳು ಕರೆಯುತ್ತಿದ್ದಾರೆ ಸರ್ ಎಂದು ಮತ್ತೆ ತನ್ನ ಕಾರ್ಯದಲ್ಲಿ ಮಗ್ನರಾದರು.