ಮಂಗಳೂರು, ಎ12(SS): ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಿತ್ಯಬಲಿ, ದಂಡಮಾಲೆ, ಐದು ದಿನಗಳ ಚೆಂಡಾಟ, ರಥೋತ್ಸವ ಈಗಾಗಲೇ ಮುಗಿದಿದ್ದು, ಇಂದು (ಎ.12) ಫಲ್ಗುಣಿ ನದಿಯಲ್ಲಿ ಅವಭೃಥ ಸ್ನಾನ ನಡೆದು ಧ್ವಜಾವರೋಹಣದೊಂದಿಗೆ ಒಂದು ತಿಂಗಳ ಜಾತ್ರೆ ಸಂಪನ್ನಗೊಳ್ಳುತ್ತದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬರೋಬ್ಬರಿ ಒಂದು ತಿಂಗಳ ಜಾತ್ರೆ ಸಮಾರೋಪದ ಹಂತದಲ್ಲಿದೆ. ಒಂದು ತಿಂಗಳ ಅವಧಿಯ ಐದು ದಿನಗಳ ಚೆಂಡಿನಾಟ, ರಥೋತ್ಸವ ವೈಭವದಿಂದ ನಡೆದಿದ್ದು, ಲಕ್ಷಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಲಕ್ಷಕ್ಕೂ ಮಿಕ್ಕಿ ಭಕ್ತರು ಜಾತ್ರೆಯ ಹೊರಾಂಗಣದ ಸಂಭ್ರಮದಂತೆಯೇ ದೇವರ ಧಾರ್ಮಿಕ ವಿಧಿ ವಿಧಾನಗಳಿಗೂ ಸಕ್ರಿಯರಾಗಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ರಥೋತ್ಸವದ ಹೊರತಾಗಿ, ಚೆಂಡು ಉತ್ಸವದ ಸಂದರ್ಭದಲ್ಲಿ ಐದು ದಿನಗಳಲ್ಲಿ ಬೇರೆ ಬೇರೆ ರೀತಿಯ ಐದು ಪ್ರತ್ಯೇಕ ರಥಗಳ ಉತ್ಸವ ಕ್ಷೇತ್ರದಲ್ಲಿ ನಡೆದಿದೆ. ಕುಮಾರ ತೇರು, ಹೂ ತೇರು, ಸೂರ್ಯ ಮಂಡಲ, ಚಂದ್ರಮಂಡಲ ಮತ್ತು ಆಳು ಪಲ್ಲಕಿ ರಥಗಳು ಬಲಿ ಉತ್ಸವದ ಮೆರುಗು ಹೆಚ್ಚಿಸಿದೆ.
ಬ್ರಹ್ಮರಥೋತ್ಸವದೊಂದಿಗೆ ಜಾತ್ರೆಯ ಸೊಬಗು ತಾರಕಕ್ಕೇರಿದರೆ, ಇಂದು ಫಲ್ಗುಣಿ ನದಿಯಲ್ಲಿ ಅವಭೃಥ ಸ್ನಾನ ನಡೆದು ಧ್ವಜಾವರೋಹಣದೊಂದಿಗೆ ಜಾತ್ರೆಯ ಐಸಿರಿ ಮುಕ್ತಾಯವಾಗಲಿದೆ.