ಮೂಲ್ಕಿ, ಎ12(SS): ಜನರಲ್ಲಿ ಸಾಮರಸ್ಯದ ವಾತಾವರಣ ಮೂಡಿಸಿ ಸಹಬಾಳ್ವೆಯನ್ನು ನಡೆಸುವ ಮೂಲಕ ಕೇಸರಿ ಬಣ್ಣವನ್ನು ಬಳಸಿಕೊಳ್ಳುವ ಹಿಂದುತ್ವ ನಮ್ಮದು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಹಿಂದುತ್ವವನ್ನು ನಾನು ನಳಿನ್ ಕುಮಾರ್ ಕಟೀಲು ಅವರಲ್ಲಿ ಕಲಿಯುವ ಅಗತ್ಯವಿಲ್ಲ . ನಾನು ಒಬ್ಬ ಹಿಂದೂ. ನಾನೊಬ್ಬ ಹಿಂದೂವಾಗಿ ನನ್ನ ದೇವರನ್ನು ರಾಜಕಾಣಕ್ಕೆ ತಾರದೇ ನನ್ನ ಮನೆಯ ದೇವರ ಗರ್ಭಗುಡಿಯಲ್ಲಿ ಇಟ್ಟು ಪೂಜಿಸುತ್ತೇನೆ ಎಂದು ಹೇಳಿದರು.
ಜನರಲ್ಲಿ ಸಾಮರಸ್ಯದ ವಾತಾವರಣ ಮೂಡಿಸಿ ಸಹಬಾಳ್ವೆಯನ್ನು ನಡೆಸುವ ಮೂಲಕ ಕೇಸರಿ ಬಣ್ಣವನ್ನು ಬಳಸಿಕೊಳ್ಳುವ ಹಿಂದುತ್ವ ನಮ್ಮದು. ಈ ಬಗ್ಗೆ ನಾನು ನಳಿನ್ ಕುಮಾರ್ ಕಟೀಲು ಅವರಲ್ಲಿ ಕಲಿಯುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಮಂಗಳೂರಿನ ವಿಮಾನ ನಿಲ್ದಾಣ, ಪಣಂಬೂರಿನ ಬಂದರು ಮಂಡಳಿಯನ್ನು ಖಾಸಾಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರಕಾರಕ್ಕೆ ಸಾಥ್ ಕೊಟ್ಟಿದ್ದಾರೆ. ಮಾತ್ರವಲ್ಲ, ಇದರ ಜತೆಗೆ ವಿಜಯ ಬ್ಯಾಂಕನ್ನು ಬಲಿ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು.
ಸದ್ಯ ಕರಾವಳಿಯಲ್ಲಿ ಲೋಕಸಭಾ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಪ್ರಚಾರದ ಭರಾಟೆಯೂ ಜೋರಿದೆ.ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತಮ್ಮ ಎದುರಾಳಿಗಳನ್ನು ಸೋಲಿಸಲು ಹಲವು ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಘಟಾನುಘಟಿ ನಾಯಕರು ಕರಾವಳಿಗೆ ಬಂದು ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿಯೂ ತೊಡಗಿದ್ದಾರೆ.