ಮಂಗಳೂರು, ಏ 12(MSP): ಲೋಕಸಭೆ ಚುನಾವಣೆ ಪ್ರಚಾರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏ.13) ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಲಿದ್ದು, ಅಂತಿಮ ಹಂತದ ಸಿದ್ಧತೆ ನಡೆಸಲಾಗುತ್ತಿದೆ. ಪೂರ್ಣ ಬಂದೋಬಸ್ತ್ ನಿಯೋಜಿಸಲಾಗಿದೆ.
ಸಮಾವೇಶದಲ್ಲಿ ರಾಜ್ಯದ ಹಾಗೂ ಜಿಲ್ಲಾ ಬಿಜೆಪಿ ಪ್ರಮುಖರು ಭಾಗವಹಿಸಲಿದ್ದು, ಬಿಜೆಪಿ ಅಭ್ಯರ್ಥಿಗಳಾದ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಹಾಗೂ ಅನಂತ್ ಕುಮಾರ್ ಹೆಗ್ಡೆ ಪರ ಮತ ಯಾಚನೆ ಮಾಡಲಿದ್ದಾರೆ.
ಏ.13ರಂದು ಮಧ್ಯಾಹ್ನ 2.45ಕ್ಕೆ ಮಧುರೈಯಿಂದ ವಿಶೇಷ ವಿಮಾನದಲ್ಲಿ ಹೊರಡಲಿರುವ ಪ್ರಧಾನಿ ಮೋದಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4 ಗಂಟೆಗೆ ಸುಮಾರಿಗೆ ತಲುಪಲಿದ್ದಾರೆ. ವಿಮಾನ ನಿಲ್ದಾಣದಿಂದ ನಂತರ ರಸ್ತೆ ಮಾರ್ಗದ ಮೂಲಕ ಕೇಂದ್ರ ಮೈದಾನಕ್ಕೆ ಆಗಮಿಸಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ. 5.20ರ ಸುಮಾರಿಗೆ ಬಜಪೆಗೆ ಆಗಮಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಅವರಿಗೆ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಸಮ್ಮಾನ ನಡೆಯಲಿದ್ದು, ತುಳುನಾಡನ್ನು ನೆನಪಿಸುವ ವಿಶೇಷ ಸ್ಮರಣಿಕೆ ನೀಡಲು ನಿರ್ಧರಿಸಲಾಗಿದೆ.