ಪುತ್ತೂರು,ಏ 12(MSP): ವಿದುತ್ಯ್ ತಂತಿ ಜೋಡಣೆಯ ಸಂದರ್ಭ ವಿದ್ಯುತ್ ಪ್ರವಹಿಸಿದ ಪರಿಣಾಮವಾಗಿ ಕಂಬದ ಮೇಲೆ ಕೆಲಸದಲ್ಲಿ ನಿರತವಾಗಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರೊಬ್ಬರು ಗಂಭೀರ ಗಾಯ ಗೊಂಡ ಘಟನೆ ಪುತ್ತೂರು ನಗರದ ಹೊರವಲಯದಲ್ಲಿ ಏ.11 ರ ಗುರುವಾರ ನಡೆದಿದೆ. ಕಂಬದಲ್ಲಿ ಇಬ್ಬರು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದು, ಓರ್ವ ತಕ್ಷಣ ನೆಲಕ್ಕೆ ಜಿಗಿದು ಅನಾಹುತದಿಂದ ಬಚಾವ್ ಆಗಿದ್ದಾನೆ. ಘಟನೆಗೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಗಂಭೀರ ಗಾಯಗೊಂಡಿರುವ ಕಾರ್ಮಿಕನನ್ನು ಪಶ್ಚಿಮ ಬಂಗಾಳದ ಕೊಲ್ಕತ್ತ ನಿವಾಸಿ ಮಾಣಿಕ್ಯ್ (24) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪುತ್ತೂರು ನಗರ ಭಾಗದಲ್ಲಿ ಹಳೆಯ ವಿದ್ಯುತ್ ತಂತಿಗಳನ್ನು ತೆಗೆದುಹಾಕಿ ಹೊಸ ವಯರ್ ಗಳನ್ನು ಜೋಡಣೆ ಮಾಡುವ ಕೆಲಸ ನಡೆಯುತ್ತಿದ್ದು, ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಬೆಂಗಳೂರಿನ ಅರವಿಂದ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಸುಮಾರು 60 ಮಂದಿ ಕಾರ್ಮಿಕರು ಈ ಕಾರ್ಯದಲ್ಲಿ ನಿರತವಾಗಿದ್ದರು. ವಿದ್ಯುತ್ ಪ್ರವಹಿಸಿದ ತಕ್ಷಣ ಕಾರ್ಮಿಕ ಮಾಣಿಕ್ಯ್ ಅವರು ವಿದ್ಯುತ್ ಕಂಬದಲ್ಲಿ ತಲೆಕೆಳಗಾಗಿ ನೇತಾಡುವ ಸ್ಥಿತಿಯಲ್ಲಿ ಸಿಕ್ಕು ಹಾಕಿಕೊಂಡಿದ್ದರು. ಅವರನ್ನು ಕ್ರೇನ್ ಮೂಲಕ ಕೆಳಗೆ ಇಳಿಸಲಾಯಿತು. ಅವರಿಗೆ ತೀವ್ರವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಗುತ್ತಿಗೆದಾರ ಅನಿಲ್ ಹಾಗೂ ಮೆಸ್ಕಾಂ ಎಂಜಿನಿಯರ್ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಯಾವುದೆ ಕಾರಣಕ್ಕೂ ಮೆಸ್ಕಾಂ ನಿರ್ಲಕ್ಷ್ಯ ವಹಿಸಿಲ್ಲ . ಅರ್ತ್ ಆಫ್ ಮಾಡದೆ ವಿದ್ಯುತ್ ಪಸರಿಸುತ್ತಿದ್ದ ಕಂಬವೇರಿದ ಕಾರಣದಿಂದಾಗಿಯೇ ಈ ಘಟನೆ ನಡೆದಿರಬಹುದು ಎಂದು ಮೆಸ್ಕಾಂ ಇಲಾಖೆ ಅಧಿಕಾರಿ ರಾಮಚಂದ್ರ ಅವರು ತಿಳಿಸಿದ್ದಾರೆ.