ಮಂಗಳೂರು ನ.12: ಮಂಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಭೆ ನಡೆಯಿತು. 5 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಎರಡು ಗಂಟೆ ತಡವಾಗಿ ಆರಂಭವಾಯ್ತು. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮೂಡಬಿದ್ರೆಯಲ್ಲಿ ರ್ಯಾಲಿ ನಡೆಸಿದ ನಂತರ ಮಂಗಳೂರಿನಲ್ಲಿ ಬಿಗಿ ಭದ್ರತೆ ಮಧ್ಯೆ ಸಮಾರೋಪ ನಡೆಯಿತು.ಈ ವೇಳೆ ಬಿಜೆಪಿ ಮುಖಂಡ ಈಶ್ವರಪ್ಪ ಮತ್ತೊಂದು ಪ್ರಮಾದ ಮಾಡಿದ್ದಾರೆ. ತನ್ನ ಭಾಷಣದಲ್ಲಿ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುವ ವೇಳೆ 'ಮುಸ್ಲಿಮರನ್ನ ಗೂಂಡಾ' ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಗೋ ರಕ್ಷಕರನ್ನ ಶಿಕ್ಷಿಸುವ ಬದಲು ಸಿಎಂ ಸಿದ್ದರಾಮಯ್ಯ ಮುಸ್ಲಿಮರನ್ನ ರಕ್ಷಿಸುತ್ತಿದ್ದಾರೆ. ಗೂಂಡಾ ಮುಸ್ಲಿಮರನ್ನ ಸಿಎಂ ರಕ್ಷಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ವ್ಯಾಪಕ ಆಕ್ರೋಶ ಸೃಷ್ಟಿಸಿದೆ.
ಇನ್ನು ಇದೇ ವೇಳೆ ಮಾತನಾಡಿದ ಯಡಿಯೂರಪ್ಪ , ಪಿಎಫ್ಐ ಈ ದೇಶಕ್ಕೆ ಅಪಾಯವೆಂದು ಎನ್ಐಎ ವರದಿ ನೀಡಿದೆ. ದೇಶದ 23 ರಾಜ್ಯಗಳಲ್ಲಿ ಪಿಎಫ್ಐ ಸಕ್ರೀಯವಾಗಿದೆಯೆಂದು ಹೇಳಿದೆ. ಈಗ ದಿನೇಶ್ ಗುಂಡುರಾವ್ ಪಿಎಫ್ಐ ನಿಷೇಧಕ್ಕೆ ಹೇಳಿದ್ದಾರೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯ, ಜಾರ್ಜ್ ಪಿಎಫ್ಐ ರಕ್ಷಣೆಗೆ ನಿಂತಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಲೋಕಾಯುಕ್ತ ಮುಚ್ಚಿದ್ದಾರೆ. ಎಸಿಬಿ ರಚಿಸಿ ತನ್ನ ವಿರುದ್ಧದ ಕೇಸುಗಳನ್ನು ಮುಚ್ಚಿ ಹಾಕುತ್ತಿದ್ದಾರೆ ನಾವು ಅಧಿಕಾರಕ್ಕೆ ಬಂದಲ್ಲಿ ಸಿದ್ದರಾಮಯ್ಯ ವಿರುದ್ಧ ಏನ್ಮಾಡಬೇಕು ಗೊತ್ತು. ಎಲ್ಲ ಕೇಸುಗಳನ್ನು ಮರು ತನಿಖೆ ಮಾಡಿಸುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ಶ್ರೀರಾಮುಲು, ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸೇರಿ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.