ಮಂಗಳೂರು, ಏ 12(MSP): ಕತಾರ್ನಿಂದ ಜಪಾನ್ಗೆ ಸಾಗುತ್ತಿದ್ದ ವಿದೇಶಿ ಹಡಗಿನ ಸಿಬ್ಬಂದಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದು, ಅವರನ್ನು ಕರಾವಳಿ ಕಾವಲು ಪಡೆ ರಕ್ಷಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಅವರ ಅರೋಗ್ಯ ಮಟ್ಟ ಸುಧಾರಿಸಿಕೊಳ್ಳುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳೂರು ಕಡಲ ತೀರದಿಂದ 300 ನಾಟಿಕಲ್ ಮೈಲ್ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಕತಾರ್ನಿಂದ ಜಪಾನ್ಗೆ ಎಲ್ ಎನ್ ಜಿ ಸಾಗಿಸುತ್ತಿದ್ದ ಎಂವಿ ಬ್ರೂಗ್ ಹೆಸರಿನ ಸರಕು ಸಾಗಣೆ ಹಡಗಿನ ಸಿಬ್ಬಂದಿ ರೆಗೌಟಾ ಆರ್ವೆನ್ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಶಣ ಹಡಗಿನ ಕ್ಯಾಪ್ಟನ್ ವಿಲ್ಫ್ರೋ ಅವರು ಪಣಂಬೂರಿನ ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿಗೆ ಇ–ಮೇಲ್ ಮೂಲಕ ವಿಷಯ ರವಾನಿಸಿದರು
ಕರಾವಳಿ ಕಾವಲು ಪಡೆ, ಎನ್ಎಂ ಪಿಟಿಯ ಉಪ ಸಂರಕ್ಷಣಾಧಿಕಾರಿ, ಸಂಚಾರ ನಿಯಂತ್ರಕ, ಕಸ್ಟಮ್ಸ್ ಮತ್ತು ಇಮಿಗ್ರೇಷನ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಕೂಡಲೇ ಸಿಬ್ಬಂದಿಯನ್ನು ನಗರಕ್ಕೆ ಕರೆತಂದಿದ್ದಾರೆ.
ಸಿಬ್ಬಂದಿ ರೆಗೌಟಾ ಆರ್ವೆನ್ ಅವರು ಅಪೆಂಡಿಕ್ಸ್ ತೊಂದರೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಎಸಿ ಶಿಪ್ಪಿಂಗ್ ಕಂಪನಿಯ ಮೂಲಗಳು ತಿಳಿಸಿವೆ.