ಮಂಗಳೂರು, ಏ 12(MSP): ಮಂಗಳೂರು ವಿಶ್ವವಿದ್ಯಾಲಯ ಹೊರಡಿಸಿರುವ ಏ.10 ರಂದು ಹೊರಡಿಸಿರುವ ಆದೇಶ ಪತ್ರ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಧಿಡೀರ್ ಆಗಿ ಏ.13 ರ ಎರಡನೇ ಶನಿವಾರದ ರಜೆಯನ್ನು ರದ್ದುಗೊಳಿಸಿ ಕಾರ್ಯನಿರ್ವಹಿಸುವ ದಿನ ಎಂದು ಆದೇಶ ಹೊರಡಿಸಿರುವುದೇ ವಿವಾದಕ್ಕೆ ಕಾರಣವಾಗಿದೆ.
ಆದರೆ ಈ ಆದೇಶದ ಹಿಂದೆ ನಗರದಲ್ಲಿ ಏ.13 ರಂದು ನಡೆಯುವ ಮೋದಿ ಅವರ ಸಮಾವೇಶದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸದಂತೆ ತಡೆಯುವ ದೃಷ್ಟಿಯಿಂದ ಈ ಆದೇಶ ನೀಡಲಾಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಮಂಗಳೂರು ವಿಶ್ವವಿದ್ಯಾಲಯ ಹೊರಡಿಸಿರುವ ಆದೇಶ ಪತ್ರದಲ್ಲಿ ಎರಡನೇ ಶನಿವಾರದ ರಜೆಯನ್ನು ರದ್ದುಗೊಳಿಸಿಕ್ಕೆ ಯಾವುದೇ ಕಾರಣ ನೀಡಲಿಲ್ಲ. ಬದಲಾಗಿ ಏಪ್ರಿಲ್ 13 ರಂದು ಇದ್ದ ಸಾರ್ವತ್ರಿಕ ರಜಾ ದಿನವನ್ನು ಕರ್ತವ್ಯದ ದಿನವೆಂದು ಪರಿಗಣಿಸಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸದರಿ ದಿನದ ಬದಲಿಗೆ ಏಪ್ರಿಲ್ 20 ರಂದು ಶನಿವಾರ ರಜಾ ದಿನವೆಂದು ಘೋಷಿಸಿ ಮಂಗಳೂರು ವಿ.ವಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ವಿ.ವಿ ಮಟ್ಟದಲ್ಲಿ ಈ ಆದೇಶಕ್ಕೀಗಾ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಉದ್ದೇಶಪೂರ್ವಕವಾಗಿ ಮಂಗಳೂರು ವಿವಿ ಈ ಆದೇಶ ಪತ್ರ ಹೊರಡಿಸಿದೆ ಎಂದು ಆರೋಪಿಸಲಾಗುತ್ತಿದೆ. ದಕ್ಷಿಣ ಕನ್ನಡ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಈ ಆದೇಶ ನೀಡಲಾಗಿದೆ ಎಂದು ದೂರಲಾಗುತ್ತಿದೆ.