ಮಂಗಳೂರು,ನ.12: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಡ್ರಗ್ಸ್ ಹಾವಳಿ ಮಿತಿ ಮೀರಿದೆ. ಇದನ್ನು ಸರಕಾರ ತಡೆಗಟ್ಟಬೇಕಿತ್ತು. ಆದರೆ, ಡ್ರಗ್ಸ್ ಮಾಫಿಯಾ ಸರಕಾರವನ್ನೇ ನಿಯಂತ್ರಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯ ಸರಕಾರ ಭಷ್ಟಾಚಾರದ ಸರಕಾರ. ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರವನ್ನು ನಾಳೆ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ದಾಕಲೆ ಸಮೇತ ಮುಂದಿಡುತ್ತೇವೆ, ಈ ಸರಕಾರದ ಅವಧಿಯಲ್ಲಿ ಹಲವು ಭ್ರಷ್ಟಾಚಾರ ಹಗರಣ ನಡೆದಿದೆ. ವೇಣುಗೋಪಾಲ್ ಲೈಂಗಿಕ ಹಗರಣ ಜಗಜ್ಜಾಹೀರಾಗಿದೆ. ವೇಣುಗೋಪಾಲ್ ಅವರನ್ನು ರಾಜ್ಯ ಉಸ್ತುವಾರಿಯಿಂದ ಕೈಬಿಡಬೇಕು. ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇವರು ಪ್ರಾಮಾಣಿಕರಾಗಿದ್ದರೆ ಈ ಎಲ್ಲಾ ಹಗರಣಗಳನ್ನು ಸಿಬಿಐ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಕರಾವಳಿಯು ಸೂಕ್ಷ ಜಿಲ್ಲೆಯಾಗಿದ್ದು ಇಲ್ಲಿ ಅನೇಕ ಹಲ್ಲೆ ಮತ್ತು ಹತ್ಯೆ ಪ್ರಕರಣಗಳು ನಡೆಯುತ್ತಿದೆ. ಇನ್ನು ಯುವಕರನ್ನು ಐಸಿಸ್ ಸಂಘಟನೆಗೆ ಸೇರಿಸುವ ಏಜೆಂಟರು ಇಲ್ಲಿದ್ದಾರೆ. ಇದನೆಲ್ಲ ತಡೆಯಲು ಬಿಜೆಪಿ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್ ಐಎ) ಕಚೇರಿ ತೆರೆಯಲಾಗುವುದು ಎಂದವರು ಹೇಳಿದರು.
ಇನ್ನು ಬಿಬಿಎಂಪಿ ರಸ್ತೆಯನ್ನು 4.6 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಿದ್ದಾರೆ. ಆದರೆ ರಸ್ತೆಯಲ್ಲಿರುವ ಹೊಂಡ ಗುಂಡಿಗಳು ಇನ್ನು ಹಾಗೆ ಉಳಿದಿವೆ. ಸರಕಾರ ನೀಡಿದ ಅನುದಾನದಿಂದ ಬೆಂಗಳೂರಿಗೆ ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಬಹುದಿತ್ತು. ಇನ್ನು ಪರಿಶಿಷ್ಟ ಜಾತಿಯ ಜನರ ಅಭಿವೃದ್ದಿಗೆ ಸರಕಾರದಿಂದ 75 ಕೋಟಿ ರೂ. ಅನುದಾನ ಪಡೆದು ಶಾಲಾ ವಿದ್ಯಾರ್ಥಿಗಳಿಗೆ ಕಡಿಮೆ ಗುಣಮಟ್ಟದ ಶಾಲಾ ಸಮವಸ್ತ್ರವನ್ನು ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ನಾಗರಾಜ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಸಂಸದ ನಳೀನ್ ಕುಮಾರ್ ಕಟೀಲ್, ಸುಲೋಚನಾ ಭಟ್ಟ್ ಉಪಸ್ಥಿತರಿದ್ದರು.