ಮಂಗಳೂರು,ಏ 12(MSP): ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲೆಂದು ಉತ್ಸಾಹದಿಂದ ಹೊರಟ ಯುವಕನೊಬ್ಬನ ವಿಮಾನದ ಟಿಕೆಟ್ ನ್ನು ಕಿಡಿಗೇಡಿಗಳು ರದ್ದುಗೊಳಿಸಿದ ಘಟನೆ ನಡೆದಿದೆ.
ಪುತ್ತೂರಿನ ಜಾಯ್ ಸ್ಟನ್ ಲೋಬೋ ಎಂಬವರು ಮಸ್ಕತ್ ನಲ್ಲಿ ಜೂನಿಯರ್ ಚಾರ್ಟೆಡ್ ಎಕೌಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತದಾನ ಮಾಡಲೆಂದೇ ತವರೂರು ಪುತ್ತೂರಿಗೆ ಏ.4 ರಂದು ಆಗಮಿಸಲೆಂದು ಮುಂಚಿತವಾಗಿ ಟಿಕೆಟ್ ಕೂಡಾ ಕಾಯ್ದಿರಿಸಿದ್ದರು. ಬಳಿಕ " ನನ್ನ ಆತ್ಮೀಯರೊಬ್ಬರು ಚುನಾವಣೆಗೆ ನಿಂತಿದ್ದಾರೆ ನಾನು ಮತದಾನ ಮಾಡಲೆಂದೇ ದೂರದ ಮಸ್ಕತ್ ನಿಂದ ಆಗಮಿಸುತ್ತಿದ್ದು, ನೀವು ಕೂಡಾ ಮತದಾನದಲ್ಲಿ ಪಾಲ್ಗೊಳ್ಳಿ " ಎಂದು ವಿಡಿಯೋ ಸಂದೇಶವೊಂದನ್ನು ತನ್ನ ಮಾರ್ಚ್ 30 ರ 10 ಗಂಟೆಗೆ ಗೆಳೆಯರೊಬ್ಬರಿಗೆ ಕಳುಹಿಸಿದ್ದರು. ಆವರ ಗೆಳೆಯ ಈ ವಿಡಿಯೋವನ್ನು ವಾಟ್ಯಾಪ್ , ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದಾದ ಕೇವಲ ಒಂದು ಗಂಟೆಯಲ್ಲಿ ಏರ್ ಇಂಡಿಯಾ ವಿಮಾನ ಟಿಕೆಟ್ ರದ್ದಾಗಿದೆ.
ಈ ಬಗ್ಗೆ ದೈಯ್ಜಿವಲ್ಡ್ ನೊಂದಿಗೆ ಮಾತನಾಡಿದ ಜಾಯ್ ಸ್ಟನ್ " ನಾನು ವಿದೇಶಕ್ಕೆ ಆಗಮಿಸಿ ಇನ್ನು ವರ್ಷವೂ ಕಳೆದಿಲ್ಲ. ಆದರೆ ಮತದಾನಕ್ಕಾಗಿ ಊರಿಗೆ ಬರುವ ಇಚ್ಚೆಯಿಂದ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿ ಎಲ್ಲರೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಿ ವಿಡೀಯೋ ಆಪ್ ಲೋಡ್ ಮಾಡಿದ್ದೆ. ಇದಾದ ಕೇವಲ ಒಂದು ಗಂಟೆಯಲ್ಲಿ ಟಿಕೆಟ್ ನ್ನು ಯಾರೋ ರದ್ದು ಮಾಡಿದ್ದಾರೆ. ಆದರೆ ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಏ.1 ರಂದು ಕಚೇರಿಯ ಮ್ಯಾನೇಜರ್ ಟಿಕೆಟ್ ರದ್ದು ಮಾಡಿರುವ ವಿಚಾರವಾಗಿ ನನ್ನನ್ನು ಪ್ರಶ್ನಿಸಿದ್ದಾರೆ. ಆಗ ವಿಚಾರ ನನ್ನ ಗಮನಕ್ಕೆ ಬಂದಿದೆ. ಮೊದಲು ನನಗೆ ವಿಮಾನ ಟಿಕೆಟ್ ಬುಕ್ ಮಾಡಿರುವ ಏಜೆಂಟ್ ಬಗ್ಗೆ ಸಂಶಯವಿತ್ತು. ಆದರೆ ಅಲ್ಲಿ ವಿಚಾರಿಸಿದ ಬಳಿಕ ಯಾರೋ ಕಿಡಿಗೇಡಿಗಳು ಟಿಕೆಟ್ ಕ್ಯಾನ್ಸಲ್ ಮಾಡಿರುವ ಬಗ್ಗೆ ಮನವರಿಕೆ ಆಯಿತು. ವಿಡಿಯೋದಲ್ಲಿರು ಟಿಕೆಟ್ ಹಾಗೂ ಅದರಲ್ಲಿದ್ದ ಪಿ ಎನ್ ಆರ್ ಮತ್ತು ನನ್ನ ಹೆಸರು ಬಳಸಿ ವಿಮಾನದ ಟಿಕೆಟ್ ರದ್ದುಗೊಳಿಸಿರುವ ಸಾಧ್ಯತೆ ಇದೆ" ಎನ್ನುತ್ತಾರೆ.
ಮತದಾನಕ್ಕಾಗಿ ಊರಿಗೆ ಆಗಮಿಸಲೇ ಬೇಕು ಎಂಬ ಕಾರಣದಿಂದ ಹಠ ಬಿಡದೇ ಏ.4 ರಂದೇ ತಾಯ್ನಾಡಿಗೆ ಆಗಮಿಸಿದ್ದಾರೆ. ಜಾಯ್ ಸ್ಟನ್ ಅವರು ಊರಿಗೆ ಬಂದು ಮರಳಿ ಹೋಗಲು ಟಿಕೆಟ್ ಮೊತ್ತ 21045 ರೂ ವನ್ನು ಪಾವತಿಸಿದ್ದರು. ಟಿಕೆಟ್ ರದ್ದಾದ ಕಾರಣ 9000 ಮರಳಿ ಸಿಕ್ಕಿದೆ.
ಇನ್ನು ಬಲ್ಲ ಮೂಲಗಳ ಮಾಹಿತಿಯಂತೆ ಜಾಯ್ ಸ್ಟನ್ ಅವರ ವಿಮಾನದ ಟಿಕೆಟ್ ರಿಯಾದ್ ನಿಂದ ರದ್ದುಗೊಂಡಿದೆ. ಆಶ್ಚರ್ಯ ಎಂದರೆ ಇಷ್ಟೊಂದು ಸುಲಭ ರೀತಿಯಲ್ಲಿ ಟಿಕೆಟ್ ರದ್ದು ಮಾಡಲು ಸಾಧ್ಯವೇ ಎಂಬ ಚರ್ಚೆ ಇದೀಗ ನಡೆಯುತ್ತಿದೆ.