ಮಂಗಳೂರು, ಎ12(SS): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಬಿರುಸಿನ ಪೈಪೋಟಿ ಇದೆ. ಕರಾವಳಿಯಲ್ಲಿ ಮೋದಿ ಅಲೆಯ ನಡುವೆ ಉಭಯ ಪಕ್ಷಗಳ ಆರೋಪ – ಪ್ರತ್ಯಾರೋಪಗಳ ಅಬ್ಬರ ಈ ಬಾರಿ ತುಸು ಹೆಚ್ಚಾಗಿಯೇ ಇದೆ.
ಕಳೆದ 20ಕ್ಕೂ ಹೆಚ್ಚು ವರುಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಈ ಬಾರಿ ಕಾಂಗ್ರೆಸ್ ಮಣಿಸಲು ತಂತ್ರಗಾರಿಕೆ ರೂಪಿಸುತ್ತಿದೆ. ಕಾಂಗ್ರೆಸ್ ಪಕ್ಷದ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಏನೂ ಕಡಿಮೆ ಇಲ್ಲ ಎನ್ನುವಂತೆ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜಯ ಯಾತ್ರೆಯನ್ನು ಮುಂದುವರಿಸುವ ತವಕದಲ್ಲಿ ಬಿಜೆಪಿ ಇದೆ. ಬಿಜೆಪಿಯಿಂದ ಸತತ ಮೂರನೇ ಬಾರಿಗೆ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಣದಲ್ಲಿದ್ದಾರೆ.
ಇತ್ತ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಮಣಿಸಲು ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಈ ಬಾರಿ ಹೊಸ ಮುಖವನ್ನು ಕಣಕ್ಕೆ ಇಳಿಸಿದೆ. ಯುವ ನಾಯಕ ಮಿಥುನ್ ರೈ ದಕ್ಷಿಣ ಕನ್ನಡ ಜಿಲ್ಲೆಯ ಮೈತ್ರಿ ಅಭ್ಯರ್ಥಿ.
ಈಗಾಗಲೇ ಕರಾವಳಿ ಸೇರಿದಂತೆ ಯುವಪಡೆಯ ಮನ ಗೆದ್ದಿರುವ ಮಿಥುನ್ ರೈ ಹೊಸ ಹುರುಪಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಸಲುವಾಗಿ ಮತದಾರರನ್ನು ತಲುಪುವ ಕಾರ್ಯವನ್ನು ಮಾಡುತ್ತಿದ್ದಾರೆ. 29 ವರ್ಷಗಳ ಬಳಿಕ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಕರಾವಳಿಯಲ್ಲಿ ಒಂದಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಲ್ಲಿಯೂ ಮಿಥುನ್ ರೈ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಸಚಿವ ಯು.ಟಿ ಖಾದರ್, ರಮಾನಾಥ ರೈ, ಅಭಯಚಂದ್ರ ಜೈನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಮಿಥುನ್ ರೈಗೆ ಸಾಥ್ ನೀಡುತ್ತಿದ್ದಾರೆ. ವಿಶೇಷವೆಂದರೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಕೂಡ ಮಿಥುನ್ ರೈ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಒಟ್ಟಾರೆ, ಲೋಕಸಭಾ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈಯನ್ನು ಕಣಕ್ಕಿಳಿಸಿದ್ದು, ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆ ಕೈ ವಶವಾಗುತ್ತಾ ಅನ್ನುವುದು ಸದ್ಯ ಎಲ್ಲರ ಕುತೂಹಲ.