ಮಂಗಳೂರು, ಏ 12(MSP): ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್ ಜೆ.ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಬೆಂಬಲ ವ್ಯಕ್ತಪಡಿಸಿದ್ದು, ಕರಾವಳಿಯ ಸಮಗ್ರ ಅಭಿವೃದ್ದಿಗಾಗಿ ಹಾಗೂ ತಂದೆ ಜನಾರ್ದನ ಪೂಜಾರಿ ಕನಸು ನನಸಾಗಬೇಕೆಂದರೆ ಮಿಥುನ್ ರೈ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿ ಎಂದು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.
ನಗರದಲ್ಲಿ ಏ.12ರ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನನ್ನ ತ೦ದೆ ಬಿ. ಜನಾರ್ದನ ಪೂಜಾರಿ ಅವರು ರಾಜಕೀಯದಲ್ಲಿದ್ದರೂ ಅವರ ಕುಟುಂಬದ ಸದಸ್ಯರಾದ ನಾವು ಎಂದೂ ಕೂಡಾ ರಾಜಕೀಯವನ್ನು ಬಳಸಿಕೊಂಡಿಲ್ಲ. ಆದರೆ ಪ್ರಸ್ತುತ ಕರಾವಳಿಯ ರಾಜಕೀಯ ಮತ್ತು ಅಭಿವೃದ್ಧಿ ಪರ ವಿಚಾರಗಳನ್ನು ಅವಲೋಕಿಸಿಕೊಂಡು ಒಂದಿಷ್ಟು ವಿಚಾರಗಳನ್ನು ಕೂಲಂಕುಷವಾಗಿ ಸಾರ್ವಜನಿಕರ ಮುಂದಿಡುವುದು ಅನಿವಾರ್ಯವಾಗಿದೆ.
ಉಳ್ಳಾಲ ಶ್ರೀನಿವಾಸ ಮಲ್ಯರ ಕಾಲ ಘಟ್ಟದಿಂದ ಜನಾರ್ಧನ ಪೂಜಾರಿ ಅವರ ತನಕ ಆಗಿರುವ ಕೇಂದ್ರ ಸರ್ಕಾರದ ಅನುದಾನದ ಆಧಾರದ ಮೇಲೆ ನಡೆದ ಅಭಿವೃದ್ದಿ ಯೋಜನೆಗಳು, ಅನಂತರ ಬಿಜೆಪಿ ಲೋಕಸಭಾ ಸದಸ್ಯರ ಅವಧಿಯಲ್ಲಿ ಯಾವುದೇ ಹೊಸ ಯೋಜನೆಗಳು ಅನುಷ್ಠಾನ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಹೆಚ್ಚಿನ ಅಕ್ಷರಸ್ಥರ ಬುದ್ಧಿವಂತರ ಮತ್ತು ವಿಜ್ಞಾನ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ಬ್ಯಾಂಕಿಂಗ್, ಎಂಜಿನಿಯರಿಂಗ್ ಮುಂತಾದ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಾಧನೆ ಮಾಡಿದ್ದು, ಯುವ ಜನಾಂಗವನ್ನು ಹೊಂದಿದ ಪ್ರದೇಶವಾಗಿದೆ, ಇಂತಹ ಜನರನ್ನು ಪ್ರತಿನಿಧಿಸಬಲ್ಲ ಲೋಕಸಭಾ ಸದಸ್ಯರು ಕೂಡ ಅಂತಹುದೇ ಶಿಕ್ಷಣ ಪಡೆದು ಮತ್ತು ಕರಾವಳಿಯ ಸುಶಿಕ್ಷಿತ ಜನರ ಪ್ರತಿನಿಧಿಯಾಗಿರಬೇಕೆಂದು ಮತದಾರರು ಬಯಸುವುದು ತಪ್ಪಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಮಾಡುವುದಕ್ಕಾಗಿ ನರೇಂದ್ರ ಮೋದಿ ಅವರ ಹೆಸರಲ್ಲಿ ಮತ ಕೇಳಲಾಗಿತ್ತು ಜನರು ಅದಕ್ಕೆ ಸ್ಪಂದಿಸಿದ್ದಾರೆ, ಆದರೆ, ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಆಗುವ ಬದಲು ಕರಾವಳಿಯ ಆರ್ಥಿಕ, ಔದ್ಯೋಗಿಕ ವ್ಯವಸ್ಥೆ ತಲ್ಲಣಗೊಳಿಸುವ ನೀತಿಗಳು ಕೇಂದ್ರ ಸರಕಾರ ಜಾರಿ ಮಾಡಿದೆ. ಇಲ್ಲಿನ ವಾಣಿಜ್ಯ. ವ್ಯಾಪಾರ, ಸಣ್ಣ ವ್ಯಾಪಾರ ಕ್ಷೇತ್ರಗಳಲ್ಲಿ ಅಪಾರ ನಷ್ಟ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು.
ಬಿಲ್ಲವ ಸಹಿತ ಬಹುಸಂಖ್ಯಾತ ಹಿಂದುಳಿದ ವರ್ಗದ ಸದಸ್ಯನಾಗಿ ರಾಜಕೀಯ ಕ್ಷೇತ್ರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ವರಿಗೂ ಸಮಪಾಲು, ಸಮಬಾಳ್ವೆ ದೊರೆಯಬೇಕೆಂಬುವುದು ನಮ್ಮ ಆಶಯ. ಅದೇ ರೀತಿ ಸನ್ಮಾನ್ಯ ತಂದೆಯವರಾದ ಜನಾರ್ಧನ ಪೂಜಾರಿ ಅವರಿಗೆ ಈ ವಿಚಾರಗಳಲ್ಲಿ ಕನಸುಗಳಿತ್ತು.
ಇನ್ನು ಕಾಂಗ್ರೆಸ್ ಪಕ್ಷ ಪೂಜಾರಿಯವರನ್ನಾಗಲಿ, ಬಿಲ್ಲವರನ್ನಾಗಲಿ ಕಡೆಗಣಿಸಿದೆ ಎನ್ನುವುದು ಸರಿಯಲ್ಲ. ದೇವರಾಯ ನಾಯ್ಕ, ವಿನಯ್ ಕುಮಾರ್ ಸೊರಕೆ, ಆರ್.ಎಲ್ ಜಾಲಪ್ಪ, ಜನಾರ್ಧನ ಪೂಜಾರಿ, ಎಸ್ ಬಂಗಾರಪ್ಪ, ಬಿ.ಕೆ ಹರಿಪ್ರಸಾದ್, ಮಧು ಬಂಗಾರಪ್ಪ ಮುಂತಾದವರಿಗೆ ಅವಕಾಶ ನೀಡಿದೆ. ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಿದೆ.
ಜಿಲ್ಲೆಯಲ್ಲಿ ಯುವಶಕ್ತಿಯ ಮತ್ತು ಕಾಂಗ್ರೆಸ್ ಪರ ಓಲವಿದ್ದು, ಮಿಥುನ್ ರೈ ಅವರಿಗೆ ಜಿಲ್ಲೆಯೆಲ್ಲೆಡೆ ವ್ಯಾಪಕ ಬೆಂಬಲವಿದೆ, ಅವರು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.