ಮಂಗಳೂರು, ಎ13(SS): ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬರಲಿದ್ದು ಇಡೀ ಕರಾವಳಿಯೇ ಮೋದಿಯವರನ್ನು ಸ್ವಾಗತಿಸಲು ಸಜ್ಜಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಮೋದಿ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಈಗಾಗಲೇ ಅಲರ್ಟ್ ಆಗಿದ್ದು, ಭದ್ರತೆ ಬಿಗುಗೊಳಿಸಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ರಣಕಹಳೆಯನ್ನು ಕರಾವಳಿಯಿಂದಲೇ ಮೊಳಗಿಸಿದ್ದರು. ಈ ಬಾರಿ ಮತ್ತೆ ಮೋದಿ ಮಂಗಳೂರಿಗೆ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮೋದಿಯವರು ಮಧ್ಯಾಹ್ನ 3.30ಕ್ಕೆ ನಗರದ ನೆಹರೂ ಮೈದಾನಕ್ಕೆ ಆಗಮಿಸಿ ದ.ಕ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಈಗಾಗಲೇ ಭದ್ರತೆ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಭದ್ರತೆಗಾಗಿ 5 ಕೆಎಸ್ಆರ್ಪಿ ತುಕಡಿ, ಬೆಂಗಳೂರಿನಿಂದ ಬಾಂಬು ನಿಷ್ಕ್ರಿಯದಳವನ್ನು ತರಿಸಲಾಗುತ್ತಿದೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ 24ಗಂಟೆಯೂ ಬಂದೋಬಸ್ತ್ ನಡೆಸಲಾಗುತ್ತಿದ್ದು, ಪ್ರತಿ ಠಾಣೆಯಲ್ಲಿ ರೌಂಡ್ಸ್ ಹೆಚ್ಚಿಸಲಾಗಿದೆ. ಸಮಾವೇಶ ನಡೆಯಲಿರುವ ನೆಹರು ಮೈದಾನದ ಸುತ್ತ ಭದ್ರತೆಗಾಗಿ 20 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.