ಪುತ್ತೂರು, ಎ13(SS): ನಳಿನ್ ಕುಮಾರ್ ಕಟೀಲ್ ಅವರನ್ನು ಕಳಪೆ ಸಂಸದ ಎಂದು ಹೇಳುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೇ ಮತ್ತೆ ನಳಿನ್ ಅವರನ್ನು ಸಂಸದ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎಂದೂ ಆಕಾಂಕ್ಷಿಯಾಗಿರಲಿಲ್ಲ. ಏನೂ ಗೊತ್ತಿಲ್ಲದ ವ್ಯಕ್ತಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಹೇಳಿದರು.
ನಾನು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಕಳಪೆ ಎಂದು ಹೇಳುವುದಿಲ್ಲ. ಬುದ್ಧಿವಂತರ ಜಿಲ್ಲೆಯಲ್ಲಿ ಇಷ್ಟೊಂದು ಅರ್ಹತೆಯಿದ್ದವರು ಯಾಕಾಗಿ ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡಿದರು. ಕನಿಷ್ಟ ಪಂಚಾಯತ್ ಸದಸ್ಯನೂ ಆಗದವರನ್ನು ಸಂಸದ ಸ್ಥಾನಕ್ಕೆ ಆಯ್ಕೆ ಮಾಡಿದ ಉದ್ದೇಶ ಏನು ಎಂಬುವುದನ್ನು ಜನರ ಮುಂದೆ ತಿಳಿಸಬೇಕು ಎಂದು ಒತ್ತಾಯಿಸಿದರು.
ತಾನು ಬಿಜೆಪಿಯಲ್ಲಿದ್ದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಆರ್.ಎಸ್.ಎಸ್ ಮುಖಂಡರೇ ನಳಿನ್ ಅವರ ಹೆಸರನ್ನು ಸಂಸದ ಸ್ಥಾನಕ್ಕೆ ಸೂಚಿಸಿದ್ದರು. ನಳಿನ್ ಯಾವತ್ತೂ ತನ್ನನ್ನು ಸಂಸದರನ್ನಾಗಿ ಮಾಡಿ ಎಂದು ಪಕ್ಷದ ಹಿಂದೆ ಬಿದ್ದಿರಲಿಲ್ಲ. ಇದೀಗ ಇದೇ ಸಂಘದ ಮುಖಂಡರು ನಳಿನ್ ಕುಮಾರ್ ಕಟೀಲ್ ಅವರನ್ನು ಕಳಪೆ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.