ಕಾಪು, ನ. ೧೨: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣನಿಗಿಂತಲೂ ದುಷ್ಟ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕಾಪುವಿನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರಂಭದಲ್ಲಿ ಹೇಳಿದ್ದಾರೆ. ರಾಮಾಯಣದ ಕಥೆಯೊಂದನ್ನು ಉಲ್ಲೇಖಿಸಿ ಮಾತನಾಡಿದ ಅವರು "ರಾವಣ ಕೇವಲ ಸೀತೆಯನ್ನು ಅಪಹರಣ ಮಾಡಿದ್ದಾನೆ. ಆದರೆ ಸಿದ್ದರಾಮಯ್ಯ ಹಿಂದೂ ಸಂಸ್ಕೃತಿಯನ್ನು ಹಾಳು ಮಾಡಲು ಹೊರಟ್ಟಿದ್ದಾನೆ" ಎಂದು ಏಕವಚನದಲ್ಲಿ ಹೇಳಿದ್ದಾರೆ. "ಸಿದ್ದರಾಮಯ್ಯನಿಗೆ ಮುಂದಿನ ದಿನಗಳಲ್ಲಿ ಶಾಪ ತಟ್ಟಲಿದೆ. ರೈತರ ಆತ್ಮಹತ್ಯೆಗೆ ಪೂರಕವಾಗಿ ನಿಲ್ಲುತ್ತಾನೆ, ಹಿಂದೂ ಯುವಕರ ಹತ್ಯೆಗೆ ಪ್ರೇರಣೆಯನ್ನು ನೀಡುತ್ತಾನೆ, ಗೋಹತ್ಯೆ ಮಾಡಿದವರ ಪರವಾಗಿ ನಿಲ್ಲುತ್ತಾನೆ, ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಾನೆ. ಹಿಂದೂ ಸಂಸ್ಕೃತಿಯನ್ನು ವಿಭಜನೆ ಮಾಡುವ ಈ ಸಿದ್ದರಾಮಯ್ಯ ರಾವಣನಿಗಿಂತಲೂ ದುಷ್ಟ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.