ಮಂಗಳೂರು, ಎ13(SS): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಬಿರುಸಿನ ಪೈಪೋಟಿ ಇದೆ. ಕರಾವಳಿಯಲ್ಲಿ ಮೋದಿ ಅಲೆಯ ನಡುವೆ ಉಭಯ ಪಕ್ಷಗಳ ಆರೋಪ – ಪ್ರತ್ಯಾರೋಪಗಳ ಅಬ್ಬರ ಈ ಬಾರಿ ತುಸು ಹೆಚ್ಚಾಗಿಯೇ ಇದೆ.
ಕಳೆದ 20ಕ್ಕೂ ಹೆಚ್ಚು ವರುಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಈ ಬಾರಿ ಕಾಂಗ್ರೆಸ್ ಮಣಿಸಲು ತಂತ್ರಗಾರಿಕೆ ರೂಪಿಸುತ್ತಿದೆ. ಕಾಂಗ್ರೆಸ್ ಪಕ್ಷದ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಏನೂ ಕಡಿಮೆ ಇಲ್ಲ ಎನ್ನುವಂತೆ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜಯ ಯಾತ್ರೆಯನ್ನು ಮುಂದುವರಿಸುವ ತವಕದಲ್ಲಿ ಬಿಜೆಪಿ ಇದೆ. ಬಿಜೆಪಿಯಿಂದ ಸತತ ಮೂರನೇ ಬಾರಿಗೆ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಣದಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯನ್ನು ಮಣಿಸಲು ಮೈತ್ರಿ ಪಕ್ಷಗಳಾದ ಕಾಂಗ್ರೆಸ್ - ಜೆಡಿಎಸ್ ಈ ಬಾರಿ ಯುವ ಶಕ್ತಿಗೆ ಮೊರೆ ಹೋಗಿವೆ. ಮಿಥುನ್ ರೈ ಎಂಬ ಕಾಂಗ್ರೆಸ್ನ ಯುವ ನಾಯಕನ್ನು ಕಣಕ್ಕಿಳಿಸಲಾಗಿದೆ. ವಿಶೇಷವೆಂದರೆ, ಬಿಜೆಪಿ ಹಾಗೂ ಮೈತ್ರಿ ಕೂಟದ ಅಭ್ಯರ್ಥಿಗಳು ಜಿಲ್ಲೆಯ ಪ್ರಬಲ ಸಮುದಾಯವೆನಿಸಿದ ಬಂಟ ಸಮುದಾಯಕ್ಕೆ ಸೇರಿದವರು. ಪರಿಣಾಮ, ಮಿಥುನ್ ರೈ ಮತ್ತು ನಳಿನ್ ಕುಮಾರ್ ಕಟೀಲ್ ಮಧ್ಯೆ ಈ ಬಾರಿ ತೀವ್ರ ಪೈಪೋಟಿ ನಡೆಯಲಿದೆ.
ಈ ಮಧ್ಯೆ ವಿಜಯ ಬ್ಯಾಂಕ್ ವಿಲೀನವಾಗಿರುವುದು ಬಿಜೆಪಿ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಂಪ್ ವೆಲ್, ತೊಕ್ಕೊಟ್ಟು ಫ್ಲೈಓವರ್, ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ವಿಳಂಬವೂ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗಿವೆ. ಇದರ ಮಧ್ಯೆ ರಿಂಗ್ ರಸ್ತೆ, ಕುಳಾಯಿ ಜೆಟ್ಟಿ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕುಲಶೇಖರ್–ಕಾರ್ಕಳ ಹೆದ್ದಾರಿ ಕಾಮಗಾರಿ, ಗುರುಪುರ ಹೊಸ ಸೇತುವೆ ನಿರ್ಮಾಣದಂತಹ ಕಾರ್ಯಗಳು ಬಿಜೆಪಿಯ ಪ್ರಮುಖ ಅಸ್ತ್ರಗಳಾಗಿವೆ.
ಈ ಹಿಂದೆ ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಕೇಂದ್ರದಿಂದ 16 ಸಾವಿರ ಕೋಟಿ ರುಪಾಯಿಗೂ ಅಧಿಕ ಮೊತ್ತದ ಅನುದಾನ ತರಿಸಿದ್ದೇನೆ ಎಂದು ನಳಿನ್ ಕುಮಾರ್ ಹೇಳಿಕೆ ನೀಡಿದ್ದರು. ಆದರೆ ಜಿಲ್ಲೆಯ ಅಭಿವೃದ್ಧಿಯನ್ನು ಅವರು ನಿರ್ಲಕ್ಷಿಸಿದ ಬಗ್ಗೆ ಬಿಜೆಪಿಯಲ್ಲೇ ಅಸಮಾಧಾನವಿದೆ. ಮಂಗಳೂರಿನ ಪಂಪ್ವೆಲ್ ಮತ್ತು ತೊಕ್ಕೊಟ್ಟಿನ ಮೇಲ್ಸೇತುವೆ ಕಾಮಗಾರಿ ಹಲವು ವರ್ಷಗಳಾಗಿದ್ದರೂ ಪೂರ್ಣಗೊಳ್ಳದಿರುವುದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಇನ್ನೂ ಪೂರ್ಣ ಆಗದಿರುವುದು ಬಿಜೆಪಿಯವರೇ ನಳಿನ್ ಕುಮಾರ್ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತುವಂತೆ ಮಾಡಿದೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧವೂ ಕೆಲವೊಂದು ಆರೋಪಗಳಿವೆ. ಮಿಥುನ್ ರೈ ಈ ಸ್ಥಾನಕ್ಕೆ ಸಮರ್ಥರಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದವು. ಅನುಭವವಿರುವ ಹಿರಿಯ ನಾಯಕರಿರುವಾಗ ಮಿಥುನ್ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯಲ್ಲ ಎಂಬ ಅಪಸ್ವರಗಳು ಸ್ವಪಕ್ಷದಲ್ಲಿಯೂ ಇತ್ತು. ಆದರೆ ಯುವ ನಾಯಕ ಎಂಬ ಕಾರಣಕ್ಕಾಗಿ ಮಿಥುನ್ ರೈಯನ್ನು ಕಣಕ್ಕಿಳಿಸಲಾಗಿದೆ.
ಒಟ್ಟಾರೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು, ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಉಳಿಸಿಕೊಳ್ಳುತ್ತಾರಾ ಅನ್ನುವುದು ಸದ್ಯ ಎಲ್ಲರ ಕುತೂಹಲ. ಮಾತ್ರವಲ್ಲ, ನಳಿನ್ ಕುಮಾರ್ ಕಟೀಲ್ ಮತ್ತು ಮಿಥುನ್ ರೈ ನಡುವಿನ ಪೈಪೋಟಿಯಲ್ಲಿ ಯಾರು ಗದ್ದುಗೆ ಏರುತ್ತಾರೆ ಅನ್ನುವುದನ್ನು ಕಾದುನೋಡಬೇಕಾಗಿದೆ.