ಕುಂದಾಪುರ, ಏ 13(MSP): ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರಿಗಾಗಿಯೇ ಚುನಾವಣೆ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಚುನಾವಣೆಯ ಮುಂಚಿನ ದಿನ ರಾತ್ರಿ ಬೆಂಗಳೂರಿನಿಂದ ಕರಾವಳಿಗೆ ಬರಲೆಂದು ವಿಶೇಷ ರೈಲಿನ ವೇಳಾಪಟ್ಟಿ ಬಿಡುಗಡೆಯಾಗಿದೆ.
ಬೆಂಗಳೂರಿನಿಂದ ತೆರಳುವ ಖಾಸಗಿ ಬಸ್ಗಳು ವಿಪರೀತ ದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಂತ ಮಹಾನಗರದಲ್ಲಿ ನೆಲೆಸಿರುವ ಮತದಾರರು ಮತ ಚಲಾಯಿಸಲು ಅನುವಾಗುವಂತೆ ಸಾರಿಗೆ ವ್ಯವಸ್ಥೆ ಕುರಿತು ಗಮನ ಹರಿಸುವಂತೆ ಚುನಾವಣ ಆಯೋಗ ಕೆಎಎಸ್ಆರ್ಟಿಸಿ ಮತ್ತು ರೈಲ್ವೇ ಇಲಾಖೆಗೆ ಸೂಚನೆ ನೀಡಿತ್ತು. ಈಗ ನೈಋತ್ಯ ರೈಲ್ವೇ ವಲಯದಿಂದ ಬೆಂಗಳೂರಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ತತ್ಕಾಲ್ ಸ್ಪೆಷಲ್ ಎಂಬ ಹೆಸರಿನ ರೈಲು ಹೊರಡಿಸಲು ಸೂಚನೆ ನೀಡಲಾಗಿದೆ.
ಇದು ಎ. 17ರಂದು ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಯಶವಂತಪುರದಿಂದ ಹೊರಡಲಿದೆ. ಕಾರವಾರಕ್ಕೆ ಎ. 18ರಂದು ಸಂಜೆ 3.30ಗೆ ತಲುಪಲಿದೆ. ಕಾರವಾರದಿಂದ ಸಂಜೆ 6 ಗಂಟೆಗೆ ಮರುಪ್ರಯಾಣ ಬೆಳೆಸಿ ಬೆಂಗಳೂರಿಗೆ ಶುಕ್ರವಾರ 10.35ಕ್ಕೆ ತಲುಪಲಿದೆ.