ಮಂಗಳೂರು ನ 13: ಬೆಳ್ತಂಗಡಿಯಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಯಡಿಯೂರಪ್ಪ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಸರಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಸುಳ್ಳು ಅಪಪ್ರಚಾರ ಮಾಡುವುದೇ ಅವರ ಕೆಲಸ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಅಧಿವೇಶನದಲ್ಲಿ ತಮ್ಮ ವಿರುದ್ದ ಹಗರಣ ದಾಖಲೆ ಬಹಿರಂಗಪಡಿಸುವುದಾಗಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನನ್ನ ಮೇಲೆ ಯಾವುದೇ ಎಫ್ ಐ ಆರ್ ಇಲ್ಲ, ಭ್ರಷ್ಟಚಾರ ಆರೋಪವೂ ಇಲ್ಲ ಆದರೆ ಯಡಿಯೂರಪ್ಪ ಮೇಲೆಯೇ ಹಲವು ಆರೋಪಗಳಿವೆ. ಅವರೇ ಜೈಲಿಗೆ ಹೋಗಿ ಬಂದವರು ಎಂದು ಕಿಡಿಕಾರಿದರು.
ಇನ್ನು ಪಿ ಎಫ಼್ ಐ ಸಂಘಟನೆ ನಿಷೇಧಿಸಬೇಕೆನ್ನುವ ಬಿಜೆಪಿ ಕೂಗಿಗೆ ಪ್ರತಿಕ್ರಿಯಿಸಿರುವ ಸಿಎಂ ರಾಜ್ಯದಲ್ಲಿ ಎಲ್ಲ ರೀತಿಯ ಮತೀಯ ಸಂಘಟನೆಗಳನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದರು.