ಕಾರ್ಕಳ,ಏ13(AZM):ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದಾಗಿ ಗೋಡಂಬಿ ಕಾರ್ಖಾನೆಗಳು ಸಂಕಷ್ಟದಲ್ಲಿ ಒಳಗಾಗಿದ್ದು, ಎಷ್ಟೋ ಕುಟುಂಬಗಳ ಬದುಕು ಕಷ್ಟಕರವಾಗಿದೆ ಎಂದು ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಕಾರ್ಕಳದಲ್ಲಿ ವಿವಿಧ ಗೇರುಬೀಜ ಕಾರ್ಖಾನೆಯ ಕಾರ್ಮಿಕರನ್ನು ಭೇಟಿಯಾಗಿ ಪ್ರಮೋದ್ ಮಧ್ವರಾಜರು ಮತಯಾಚಿಸಿದ ಬಳಿಕ ಈ ಕುರಿತು ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರು ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರ ಇರುವಾಗ ಗೋಡಂಬಿ ಉದ್ಯಮವು ಒಳ್ಳೆಯ ರೀತಿಯಲ್ಲಿ ನಡೆಯುತ್ತಿತ್ತು. ಇಂದು ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಜಿ.ಎಸ್.ಟಿ ಹಾಗೂ ನೋಟ್ ಬ್ಯಾನ್ ನಂತರ ಶೇ. 60 ಗೋಡಂಬಿ ಕಾರ್ಖಾನೆಗಳು ತೊಂದರೆಯಲ್ಲಿವೆ. ಪ್ರಸ್ತುತ ಕಾರ್ಯಚರಿಸುತ್ತಿರುವ ಕಾರ್ಖಾನೆಗಳು ಕೂಡಾ ನೌಕರರಿಗೆ ಪದೇ ಪದೇ ರಜೆ ಕೊಟ್ಟು ಸಾವಿರಾರು ಮಹಿಳೆಯರಿಗೆ ಉದ್ಯೋಗ ಇಲ್ಲದ ಪರಿಸ್ಥಿತಿ ಉಂಟಾಗಿದೆ. ವಿಶೇಷವಾಗಿ ಕಾರ್ಕಳ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಗೋಡಂಬಿ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದಾರೆ. ಯುವಕರಿಗೆ ಈಗಾಗಲೇ ಕೆಲಸವಿಲ್ಲ. ಮಹಿಳೆಯರಿಗೆ ಈಗ ಇದ್ದ ಕೆಲಸವೂ ಇಲ್ಲವಾದರೆ ಬದುಕು ಕಷ್ಟಕರವಾಗಲಿದೆ. ಇದನ್ನು ಮನಗಂಡು ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಬಂದಲ್ಲಿ ಘೋಷಿಸಿದ ನ್ಯಾಯ್ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಿ.ಪಿ.ಎಲ್. ಕುಟುಂಬದ ಓರ್ವ ಮಹಿಳೆಯ ಖಾತೆಗೆ ತಿಂಗಳಿಗೆ ನೇರ ನಗದು 6000 ರೂಪಾಯಿ, ವರ್ಷಕ್ಕೆ ಒಟ್ಟು 72,000 ರೂಪಾಯಿಯನ್ನು ಪಾವತಿಸುವ ಕಾರ್ಯಕ್ರಮದಿಂದ ಆರ್ಥಿಕವಾಗಿ ಮಹಿಳೆ ಸಬಲವಾಗಲು ಸಹಕಾರಿಯಾಗಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷದ ಅಭ್ಯರ್ಥಿಯ ಚಿಹ್ನೆಯಾದ ತೆನೆಹೊತ್ತ ಮಹಿಳೆಗೆ ಮತವನ್ನು ನೀಡಬೇಕಾಗಿ ಶ್ರೀ ಗೋಪಲ ಭಂಡಾರಿಯವರು ವಿನಂತಿಸಿದರು.
ಈ ಸಂದರ್ಭದಲ್ಲಿ ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್, ಮಂಜುನಾಥ ಪೂಜಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶೇಖರ ಮಡಿವಾಳ, ಶಶಿಧರ ಶೆಟ್ಟಿ ಎಲ್ಲೂರು, ಆರಿಫ್ ಕಲ್ಲೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.