ಮಂಗಳೂರು,ಏ ಕಳೆದ 5 ವರ್ಷಗಳ ಹಿಂದೆ ಕಪ್ಪುಹಣ ತರುವುದಾಗಿ, ಭ್ರಷ್ಟಾಚಾರ ನಿಗ್ರಹಿಸುವುದಾಗಿ, ಅಚ್ಛೇದಿನ್,ಸಬ್ ಕಾ ಸಾಥ್-- ಸಬ್ ಕಾ ವಿಕಾಸ್ ಮುಂತಾದ ಪೊಳ್ಳು ಭರವಸೆಗಳನ್ನು ನೀಡಿ,ದೇಶದ ಆರ್ಥಿಕತೆಯನ್ನೇ ಸರ್ವನಾಶ ಮಾಡಿ, ಜನರ ಬದುಕನ್ನು ಸಂಕಷ್ಠಕ್ಕೆ ದೂಡಿದ ನರೇಂದ್ರ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೇರಿದರೆ ದೇಶದ ಜಾತ್ಯಾತೀತ ಪರಂಪರೆ ಮತ್ತಷ್ಟು ಅಪಾಯವನ್ನು ಎದುರಿಸಲಿದೆ ಎಂದು ಸಿಪಿಐಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಅವರು ಉರ್ವಾಸ್ಟೋರಿನಲ್ಲಿ ಜರುಗಿದ ಸಿಪಿಐಎಂ ಪಕ್ಷದ ಕಾರ್ಯಕರ್ತರ,ಹಿತೈಷಿಗಳ ಸಭೆಯನ್ನುದ್ದೇಶಿಸಿ ಈ ಕುರಿತು ಮಾತನಾಡಿದರು.ದೇಶ ಕಟ್ಟಬೇಕಾದ ಯುವ ಜನತೆಗೆ ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ, ಅದಕ್ಕಾಗಿ ಮೇಕ್ ಇನ್ ಇಂಡಿಯಾ ಎಂಬ ಘೋಷಣೆಯನ್ನು ನೀಡಿದವರು ನರೇಂದ್ರ ಮೋದಿ. ಆದರೆ ಕಳೆದ 5 ವರ್ಷದಲ್ಲಿ ಸೃಷ್ಠಿಯಾಗಬೇಕಾಗಿದ್ದ 10 ಕೋಟಿ ಉದ್ಯೋಗದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗವೂ ಸೃಷ್ಠಿಯಾಗಿಲ್ಲ ಎಂಬುದನ್ನು ಕೇಂದ್ರ ಸರಕಾರದ ಇಲಾಖೆಯೇ ಧೃಢಪಡಿಸಿದೆ ಎಂದರು.
ನೋಟು ರದ್ದತಿಯಿಂದಾಗಿ ಇದ್ದ ಲಕ್ಷಾಂತರ ಉದ್ಯೋಗಗಳೇ ನಾಶವಾಗಿದೆ.ಸರಕಾರದ ತಪ್ಪು ನೀತಿಗಳಿಂದಾಗಿ ಲಕ್ಷಗಟ್ಟಲೆ ಕೈಗಾರಿಕೆಗಳು ಮುಚ್ಚುಗಡೆಯಾಗಿ ಕಾರ್ಮಿಕರು ಬೀದಿಪಾಲಾಗಿದ್ದಾರೆ.ಕಳೆದ 5 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದೆ.ಮತ್ತೊಂದು ಕಡೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲಾಗಿದೆ. ರಫೇಲ್ ಹಗರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳೆ ಕಳವಾಗಿದೆ ಎಂದು ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಸುಳ್ಳು ಹೇಳುವ ಮೂಲಕ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ.ವಾಸ್ತವತೆ ಹೀಗಿದ್ದರೂ ತನ್ನನ್ಬು ತಾನು ದೇಶ ಕಾಯುವ ಕಾವಲುಗಾರನಂತೆ ಬಿಂಬಿಸಿ,ಚೌಕಿದಾರ್ ಹೆಸರಿನಲ್ಲಿ ಮತ್ತೆ ದೇಶವನ್ನು ಲೂಟಿಗೈಯ್ಯಲು ಮೋದಿ ಸರಕಾರ ಸಂಚು ರೂಪಿಸುತ್ತಿದೆ ಎಂದು ಹೇಳಿದರು.
ದ.ಕ.ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿದ್ದರೂ ಕಳೆದ 25 ವರ್ಷಗಳಿಂದ ಬಿಜೆಪಿ ಗೆದ್ದು ಬಂದಿದ್ದರೂ,ಕಳೆದ 10 ವರ್ಷಗಳಿಂದ ನಳೀನ್ ಕುಮಾರ್ ರವರು ಸಂಸದರಾಗಿದ್ದರೂ ಜಿಲ್ಲೆಯ ಅಭಿವೃದ್ದಿಗೆ ಕಿಂಚಿತ್ತೂ ಶ್ರಮವಹಿಸಿಲ್ಲ.ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ,ಹಿಂದುತ್ವದ ಅಮಲನ್ನು ಯುವಜನರ ತಲೆಗೇರಿಸಿ ಜಿಲ್ಲೆಯೆಲ್ಲೆಡೆ ಭಯದ ವಾತಾವರಣ ಸೃಷ್ಠಿಸಿ,ಬೆಂಕಿ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆಯೇ ಹೊರತು ಈ ಜಿಲ್ಲೆಯ ಯುವಜನರಿಗೆ ಉದ್ಯೋಗ ದೊರಕಿಸಲು ಎಳ್ಳಷ್ಟೂ ಪ್ರಯತ್ನಿಸಿಲ್ಲ.ಇಂತಹ ನಾಲಾಯಕ್ಕು ಅಯೋಗ್ಯ ಸಂಸದರು ಪ್ರಜ್ಞಾವಂತ ಜಿಲ್ಲೆಯ ಪ್ರತಿಷ್ಠೆಗೆ ಕಪ್ಪು ಚುಕ್ಕೆ. ಅಂತಹವರನ್ನು ಹೀನಾಯವಾಗಿ ಸೋಲಿಸುವ ಮೂಲಕ ಪ್ರಬಲ ಜಾತ್ಯಾತೀತ ಶಕ್ತಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಿಪಿಐಎಂ ನಾಯಕರಾದ ಮನೋಜ್ ಉರ್ವಾಸ್ಟೋರುರವರು ವಹಿಸಿದ್ದರು.ವೇದಿಕೆಯಲ್ಲಿ ಸಿಪಿಐಎಂ ನಾಯಕರಾದ ಪ್ರದೀಪ್, ರಘುವೀರ್, ಕಿಶೋರ್,ಇಕ್ಬಾಲ್, ನಾಗೇಂದ್ರರವರು ಉಪಸ್ಥಿತರಿದ್ದರು.